ಗ್ರ್ಯಾಂಡ್ ಮಾಸ್ಟರ್, ಮಾಜಿ ವಿಶ್ವ ಚೆಸ್ ಚಾಂಪಿಯನ್ ಹಾಗೂ ಭಾರತದ ಚೆಸ್ ಪಂಡಿತ ವಿಶ್ವನಾಥನ್ ಆನಂದ್ ಭಾರತಕ್ಕೆ ಆಗಮಿಸಿದ್ದಾರೆ. ಕೊರೋನಾ ವೈರಸ್ ಸೋಂಕಿನಿಂದ ಮೂರು ತಿಂಗಳುಗಳ ಕಾಲ ಜರ್ಮನ್ ನಲ್ಲಿ ಬಂಧಿಯಾಗಿದ್ದ ವಿಶ್ವನಾಥನ್ ಆನಂದ್ ಅವರು ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆದ್ರೆ ಅವರು ಸೀದಾ ಚೆನ್ನೈಗೆ ಹೋಗುವಂತಿಲ್ಲ. ಅದಕ್ಕಿಂತ ಮುನ್ನ ಕರ್ನಾಟಕ ಸರ್ಕಾರದ ನಿಯಮದಂತೆ 14 ದಿನಗಳ ಕಾಲ ಕ್ವಾರಂಟೈನ್‍ನಲ್ಲಿರಬೇಕಾಗುತ್ತದೆ.
ವಿಶ್ವನಾಥನ್ ಆನಂದ್ ಅವರು ತವರಿಗೆ ಬಂದಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಕೊರೋನಾ ವೈರಸ್ ಕುರಿತಂತೆ ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿಗಳನ್ನು ಆನಂದ್ ಅವರು ಪರಿಪಾಲಿಸಿದ್ದಾರೆ. ಮೂರು ತಿಂಗಳುಗಳ ಕಾಲ ಅವರು ಜರ್ಮನಿಯಲ್ಲಿದ್ರು. ಇದೀಗ ತವರು ನಾಡಿಗೆ ಮರಳಿರುವುದು ತುಂಬಾ ಖುಷಿಯಾಗಿದೆ ಎಂದು ವಿಶ್ವನಾಥನ್ ಆನಂದ್ ಅವರ ಪತ್ನಿ ಅರುಣಾ ಆನಂದ್ ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ವಿಶ್ವನಾಥನ್ ಆನಂದ್ ಅವರು ಜರ್ಮನಿಗೆ ತೆರಳಿದ್ದರು. ಅಲ್ಲಿ ಬಿಸಿಎಲ್ ಟೂರ್ನಿಯನ್ನು ಆಡುತ್ತಿದ್ದರು. ಈ ನಡುವೆ ಕೊರೋನಾ ವೈರಸ್ ನಿಂದಾಗಿ ಅವರು ಅಲ್ಲಿಯೇ ಉಳಿದುಕೊಳ್ಳಬೇಕಾಯ್ತು. ಇದೀಗ ಮೂರು ತಿಂಗಳ ನಂತರ ನಿನ್ನೆ ರಾತ್ರಿ ಜರ್ಮನಿಯ ಫ್ರಾಂಕ್ಫರ್ಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬಂದಿದ್ದಾರೆ. ಜರ್ಮನಿಯಿಂದ ದೆಹಲಿ ಮತ್ತು ಬೆಂಗಳೂರಿಗೆ ಮಾತ್ರ ವಿಮಾನ ಪ್ರಯಾಣದ ವ್ಯವಸ್ಥೆ ಇದೆ. ಅಂದ ಹಾಗೇ ವಿಶ್ವನಾಥನ್ ಆನಂದ್ ಕೂಡ ಕೊರೋನಾ ವೈರಸ್ ಪರೀಕ್ಷೆಗೆ ಒಳಪಡಲಿದ್ದಾರೆ. ಒಂದು ವಾರಗಳ ಕಾಲ ತನಕ ಆನಂದ್ ಇನ್ಸಿಸ್ಟಿಟ್ಯೂಷನಲ್ ಕ್ವಾರಂಟನ್ ನಲ್ಲಿರುತ್ತಾರೆ. ಆದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲಿ ನೆಗೆಟಿವ್ ಬಂದ ನಂತರ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿಡಲಾಗುತ್ತದೆ.








