ಆ್ಯಂಟಿ-ಬಯೋಟಿಕ್ ಇಂಜೆಕ್ಷನ್ ಪಡೆದು ಅಸ್ವಸ್ಥಗೊಂಡ ಮಕ್ಕಳು..
ಜ್ವರ ಕೆಮ್ಮು ನೆಗಡಿ ಸೆರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ ಸುಮಾರು 14 ಮಕ್ಕಳು ಆ್ಯಂಟಿ-ಬಯೋಟಿಕ್ ಇಂಜೆಕ್ಷನ್ ಪಡೆದ ನಂತರ ಅಸ್ವಸ್ಥಗೊಂಡ ಘಟನೆ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ಸಂಜೆ ವೇಳೆ ಆಸ್ಪತ್ರೆಯ ನರ್ಸ್ Ceftriaxone Injection ಆ್ಯಂಟಿ-ಬಯೋಟಿಕ್ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಕೊಟ್ಟ ತಕ್ಷಣ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ 4 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ ಮಕ್ಕಳಿಗೆ ಉಪವಿಭಾಗೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.
ಘಟನೆ ನಂತರ ಮಕ್ಕಳ ಪೋಷಕರು ಆತಂಕಗೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಹರತಾಳು ಹಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಷಕರು ಭಯಪಡುವ ಅಗತ್ಯವಿಲ್ಲ. ಯಾವುದೇ ಮಕ್ಕಳಿಗೂ ಪ್ರಾಣಾಪಾಯ ಇಲ್ಲ. ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.








