ಕೊಲ್ಕತ್ತಾ, ಮೇ 31 : ಪಶ್ಚಿಮ ಬಂಗಾಳ ಸಚಿವ ಸುಜಿತ್ ಬೋಸ್ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಟಿಎಂಸಿ ನಾಯಕ ಮತ್ತು ಅಗ್ನಿಶಾಮಕ ಸಚಿವ ಸುಜಿತ್ ಬೋಸ್ ಅವರಿಗೆ ಕೊರೊನಾ ಸೋಂಕು ಪತ್ತೆಯಾಗುವುದರೊಂದಿಗೆ ರಾಜ್ಯದ ಸಚಿವ ಸಂಪುಟಕ್ಕೂ ಕೊರೊನಾ ಕಾಲಿರಿಸಿದೆ.
ಇತ್ತೀಚೆಗೆ ಸಚಿವರ ಮನೆಗೆಲಸದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಬೋಸ್ ಮತ್ತು ಅವರ ಕುಟುಂಬವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ವರದಿಯಲ್ಲಿ ಸಚಿವ ಬೋಸ್ ಹಾಗೂ ಅವರ ಕುಟುಂಬದ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಚಿವರು ಕೆಲ ದಿನಗಳಿಂದ ವಲಸೆ ಕಾರ್ಮಿಕರ ಅಗತ್ಯತೆ ಪೂರೈಸುವ ಸಲುವಾಗಿ ಕಾರ್ಯನಿರತರಾಗಿದ್ದು, ಇದೀಗ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ಕ್ವಾರೆಂಟೈನ್ ಗೆ ಒಳಪಡಿಸಲಾಗುತ್ತಿದೆ.
ಸುಜಿತ್ ಬೋಸ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ನನಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇರಲಿಲ್ಲ. ಕೊರೊನಾ ಹೇಗೆ ತಗುಲಿತು ಎಂಬ ಬಗ್ಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಚಿವರಲ್ಲಿ ಯಾವುದೇ ಲಕ್ಷಣಗಳು ಕಾಣಿಸದ ಹಿನ್ನಲೆಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.








