ಗೆಳತಿಯ ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ…
ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರ ಸಂಬಂಧಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಲಿಂಗ ಬದಲಾವಣೆ ಮಾಡಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.
ಸಲಿಂಗಿಗಳಾದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು, ಜೀವನದುದ್ದಕ್ಕೂ ಜೊತೆಯಾಗಿ ಇರಲು ನಿರ್ಧರಿಸಿದ್ದರು. ಆದರೆ ಇವರಿಬ್ಬರ ಸಂಬಂಧವನ್ನ ಕುಟುಂಬದವರು ಒಪ್ಪಿಕೊಳ್ಳದಿದ್ದಾಗ, ಅವರಲ್ಲಿ ಒಬ್ಬ ಯುವತಿ ತನ್ನ ಲಿಂಗವನ್ನು ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾಳೆ.
ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯ ವೈದ್ಯರ ತಂಡವು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ದೇಹದ ಮೇಲ್ಬಾಗ ಎದೆಯ ಕೂದಲಿನ ಪುನರ್ ರಚನೆಗಾಗಿ 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ ಮೋಹಿತ್ ಜೈನ್ ತಿಳಿಸಿದರು.
ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸ್ಥಿತಿಯಲ್ಲಿರುವುದಿಲ್ಲ ಎಂದು ಡಾಕ್ಟರ್ ವಿವರಿಸಿದ್ದಾರೆ “ಇಂತಹ ಆಪರೇಷನ್ ನಡೆಸಿರುವುದು ಇದೇ ಮೊದಲು ಮತ್ತು ಸುಮಾರು 18 ತಿಂಗಳ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಮಹಿಳೆಯ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗಿದೆ ಮತ್ತು ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ” ಎಂದು ಶಸ್ತ್ರ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.








