ವಾಷಿಂಗ್ಟನ್ : ಜೂನ್ ನಲ್ಲಿ ನಡೆಯಬೇಕಿದ್ದ ಜಿ7 ಶೃಂಗಸಭೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ ಗೆ ಮುಂದೂಡಿದ್ದಾರೆ. ಅಲ್ಲದೆ ಪ್ರಸ್ತುತ ಇರುವ ಜಿ7 ಸ್ವರೂಪ ಹಳೆಯದಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದು, ಭಾರತ, ರಷ್ಯಾ, ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾವನ್ನ ಆಹ್ವಾನಿಸುವುದಾಗಿ ಹೇಳಿದ್ದಾರೆ.
ಈ ಕುರಿತು ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯ ವಿಶ್ವದಾದ್ಯಂತ ಇರುವ ಪರಿಸ್ಥಿತಿಯನ್ನ ಜಿ7 ಸರಿಯಾಗಿ ಪ್ರತಿನಿಧಿಸುತ್ತಿದೆ ಅಂತ ನನಗೆ ಅನ್ನಿಸುತ್ತಿಲ್ಲ, ಹೀಗಾಗಿ ಶೃಂಗಸಭೆಯನ್ನು ಸೆಪ್ಟೆಂಬರ್ ಗೆ ಮುಂದೂಡುತ್ತಿದ್ದೇನೆ. ಜಿ7ನಲ್ಲಿ ಇರುವ ರಾಷ್ಟ್ರಗಳ ಸಮೂಹ ಹಳೆಯದಾಗಿದೆ ಎಂದ ಟ್ರಂಪ್ ಭಾರತ, ರಷ್ಯಾ, ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾವನ್ನ ಆಹ್ವಾನಿಸಲು ಬಯಸುವುದಾಗಿ ತಿಳಿಸಿದರು.
ಈ ನಡುವೆ ಶ್ವೇತಭವನದ ವಕ್ತಾರೆ ಅಲಿಸ್ಸಾ ಫರಾ ಅವರು, ಶೃಂಗಸಭೆಯಲ್ಲಿ ಚೀನಾದ ಭವಿಷ್ಯದ ಬಗ್ಗೆ ಮಾತನಾಡಲು ಅಮೆರಿಕಾದ ಇತರೆ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳನ್ನ ಹಾಗೂ ಕೊರೊನಾದಿಂದ ಬಾಧಿತವಾಗಿರುವ ದೇಶಗಳನ್ನ ತರಲು ಟ್ರಂಪ್ ಬಯಸಿದ್ದಾರೆ ಎಂದಿದ್ದಾರೆ.
ಇನ್ನು ಈ ವರ್ಷ ಜಿ7 ನ ಅಧ್ಯಕ್ಷತೆ ಅಮೆರಿಕದ ಅಧೀನವಿದೆ. ಸಾಮಾನ್ಯವಾಗಿ ಜಿ7 ಅಧ್ಯಕ್ಷರು ಈ ರಾಷ್ಟ್ರಗಳ ಹೊರತಾಗಿ ಒಂದೋ ಅಥವಾ ಎರಡೋ ಅನ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಸಭೆಗೆ ಆಹ್ವಾನಿಸುತ್ತಾರೆ. ಈ ಸಲ ಮುಂದಿನ ಜಿ7 ಶೃಂಗಕ್ಕೆ ಭಾರತವನ್ನೂ ಆಹ್ವಾನಿಸುವ ಮಾತನ್ನು ಟ್ರಂಪ್ ಹೇಳಿದ್ದಾರೆ.