ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ: ಹೊಸ ರಾಷ್ಟ್ರೀಯ ದಾಖಲೆ….
ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಒಲಿಂಪಿಕ್ ಗೇಮ್ಸ್-2020 ರ ನಂತರ ಇದು ಅವರ ಎರಡನೇ ಪ್ರಮುಖ ಪದಕವಾಗಿದೆ. 89.94 ಮೀ ಜಾವೆಲಿನ್ ಎಸೆಯುವ ಮೂಲಕ ಮತ್ತೊಮ್ಮೆ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಗುರುವಾರ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಮೀಟ್‌ನಲ್ಲಿ ನೀರಜ್ ಚೋಪ್ರಾ ತನ್ನ ಚೊಚ್ಚಲ ಪ್ರಯತ್ನದಲ್ಲಿ 89.30 ಮೀ ಎಸೆದ ತನ್ನದೇ ರಾಷ್ಟ್ರೀಯ ದಾಖಲೆಯನ್ನು 89.94 ಮೀ ಎಸೆಯುವ ಮೂಲಕ ಮುರಿದರು. ಗ್ರೆನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ತಮ್ಮ ಮೂರನೇ ಪ್ರಯತ್ನದಲ್ಲಿ 90.31 ಮೀ ಎಸೆಯುವ ಮೂಲಕ ಹೊಸ ಕೂಟ ದಾಖಲೆಯನ್ನು ನಿರ್ಮಿಸಿದರು.
https://twitter.com/i/status/1542563198754500608
ನೀರಜ್ ಮೊದಲ ಪ್ರಯತ್ನದ ನಂತರ ಆಂಡರ್ಸನ್ ಪೀಟರ್ಸ್ ಅವರಿಗಿಂತ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಭಾರತದ ತಾರೆ ತಮ್ಮ ಐದು ಎಸೆತ ಪ್ರಯತ್ನಗಳಲ್ಲಿ 89.94ಮೀ, 87.46ಮೀ, 84.77ಮೀ, 86.67 ಮತ್ತು 86.84ಮೀ ದೂರ ಕ್ರಮಿಸಿದರು. ಆಂಡರ್ಸನ್ ಪೀಟರ್ಸ್ 90.31ಮೀಟರ್‌ಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜೂಲಿಯನ್ ವೆಬರ್ ತಮ್ಮ ಐದನೇ ಪ್ರಯತ್ನದಲ್ಲಿ 89.08 ಮೀಟರ್‌ಗಳನ್ನು ಎಸೆದು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
24 ವರ್ಷದ ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೀರಜ್ ಅವರು ಒಲಿಂಪಿಕ್ ಗೇಮ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.








