ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ನಾಯಕ.. ದಾಖಲೆಗಳ ಮಹಾವೀರ.. ಆಧುನಿಕ ಕ್ರಿಕೆಟ್‍ನ ಬಾಹುಬಲಿ.. ಹೀಗೆ ವಿಶ್ವ ಕ್ರಿಕೆಟ್ ನಲ್ಲಿ ನಾನಾ ಹೆಸರಿನಿಂದಲೇ ಕರೆಸಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗಿರುವ ವಿರಾಟ್ ಆಡುತ್ತಿರುವ ವೈಖರಿಯನ್ನು ಬಣ್ಣಿಸಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‍ನ ಆರಂಭದ ದಿನಗಳಲ್ಲಿ ಅಡ್ಡದಾರಿ ಹಿಡಿದಿದ್ದ ವಿರಾಟ್ ನಂತರ ಬದಲಾದ ರೀತಿ ಮಾತ್ರ ಅದ್ಭುತವೇ ಸರಿ.
ಅಬ್ಬರದ ಬ್ಯಾಟಿಂಗ್.. ಆಕ್ರಮಣಕಾರಿ ಪ್ರವೃತ್ತಿ,, ಗೆಲ್ಲಲೇಬೇಕು ಅನ್ನೋ ಹಠ -ಛಲ, ಕ್ರಿಕೆಟ್ ಮೇಲಿನ ಆಗಾಧವಾದ ಬದ್ಧತೆಯಿಂದಲೇ ವಿರಾಟ್ ಇಂದು ಮೇರುಮಟ್ಟಕ್ಕೆ ಏರಿದ್ದಾರೆ. ದೆಹಲಿಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ವಿರಾಟ್ ತಾನು ಮುಂದೊಂದು ದಿನ ಟೀಮ್ ಇಂಡಿಯಾದ ನಾಯಕನಾಗುತ್ತೇನೆ, ವಿಶ್ವ ಕ್ರಿಕೆಟ್ ನಲ್ಲಿ ಈ ರೀತಿ ರಾರಾಜಿಸುತ್ತೇನೆ ಅನ್ನೋ ಸಣ್ಣ ಕಲ್ಪನೆಯೂ ಇರಲಿಲ್ಲ. ಆದ್ರೆ ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಬೆಳೆದು ಬಂದ ರೀತಿ, ಇತರರಿಂದ ಸಿಕ್ಕ ಪ್ರೇರಣೆಯಿಂದಲೇ ಈ ಮಟ್ಟಕ್ಕೆ ಬೆಳೆದಿದ್ದಾರೆ. ಅದ್ರಲ್ಲೂ ಆ ವ್ಯಕ್ತಿಯೊಬ್ಬರು ತನ್ನ ಕ್ರಿಕೆಟ್ ಬದುಕಿನಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದರು. ಅವರಿಂದಲೇ ನಾನು ಟೀಮ್ ಇಂಡಿಯಾದ ನಾಯಕನಾದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಹೌದು, ಆರ್. ಅಶ್ವಿನ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ವಿರಾಟ್ ತಾನು ಹೇಗೆ ಟೀಮ್ ಇಂಡಿಯಾದ ನಾಯಕನಾದೆ… ನನಗೆ ಯಾರ ಸಹಾಯ ಸಿಕ್ಕಿತ್ತು, ನನ್ನ ಬದುಕಿಗೆ ಹೊಸ ತಿರುವನ್ನು ನೀಡಿದ್ದು ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ.
ಅಂದ ಹಾಗೇ ವಿರಾಟ್ ಕೊಹ್ಲಿ 2014ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕನಾದ್ರು. ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ತಂಡದ ಸಂಪೂರ್ಣ ಜವಾಬ್ದಾರಿಯನ್ನು ಕೊಹ್ಲಿಗೆ ವಹಿಸಿ ತಾನು ಏಕದಿನ ಮತ್ತು ಟಿ-ಟ್ವೆಂಟಿ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದರು. 2017ರ ನಂತರ ಧೋನಿ ಏಕದಿನ ಮತ್ತು ಟಿ-ಟ್ವೆಂಟಿಯ ಜವಾಬ್ದಾರಿಯನ್ನು ಸಹ ಕೊಹ್ಲಿಯ ಹೆಗಲಿಗೆ ವಹಿಸಿದ್ದರು.
ನಾನು ಟೀಮ್ ಇಂಡಿಯಾದ ನಾಯಕನಾಗುತ್ತೇನೆ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಆದ್ರೆ ಧೋನಿಗೆ ನನ್ನ ಮೇಲೆ ಅಪಾರವಾದ ಆತ್ಮವಿಶ್ವಾಸವಿತ್ತು. ಪಂದ್ಯದ ವೇಳೆ ಕೆಲವೊಂದು ತಂತ್ರಗಳನ್ನು ಧೋನಿಗೆ ಹೇಳುತ್ತಿದ್ದೆ. ಆದ್ರೂ ಧೋನಿ ಅದನ್ನೆಲ್ಲಾ ನಿರಾಕರಿಸುತ್ತಿದ್ದರು. ಆದ್ರೆ ಆ ಬಗ್ಗೆ ಚರ್ಚೆ ಮಾಡುತ್ತಿದ್ದರು. ಬಹುಶಃ ಅವರು ನನ್ನನ್ನು ತುಂಬಾನೇ ಗಮನಿಸುತ್ತಿದ್ದರು ಅನ್ಸುತ್ತೆ. ಹಾಗಂತ ಅವರು ಆಯ್ಕೆಗಾರರ ಬಳಿ ಕೊಹ್ಲಿ ನಾಯಕನನ್ನಾಗಿ ಮಾಡಬೇಕು ಅಂತ ಹೇಳಲು ಸಾಧ್ಯವಿಲ್ಲ. ಆದ್ರೆ ಜವಾಬ್ದಾರಿ ಕೊಟ್ಟು ನಿಧಾನವಾಗಿ ಆತನ ಸುಧಾರಣೆಯಾಗುತ್ತಾನೆ ಎಂದು ಹೇಳಬಹುದು. ಧೋನಿ ನನ್ನ ಕ್ರಿಕೆಟ್ ಬದುಕಿನಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ ಅಂತ ವಿರಾಟ್ ಖುಷಿಯಾಗಿಯೇ ಹೇಳಿಕೊಂಡ್ರು








