ಮೈಸೂರು : ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಬೀಳುತ್ತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಅಶ್ವತ್ಥನಾರಾಯಣ್ ಅವರು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಆಂತರಿಕ ಕಚ್ಚಾಟ ಏನು ಅಂತ ಅವರಿಗೆ ಗೊತ್ತಿದೆ. ಅದರಿಂದ ಯಾವ ಸರ್ಕಾರಕ್ಕೆ ತೊಂದರೆಯಾಗಿದೆ ಎಂಬುದು ಗೊತ್ತಿದೆ. ಲಕ್ಷ್ಮಣ ರೇಖೆ ದಾಟುವವರು ಬೇರೆ ಪಕ್ಷದಲ್ಲಿ ಇರಬಹುದು. ಆದರೆ ಬಿಜೆಪಿಯಲ್ಲಿ ಅಂತಹವರು ಯಾರೂ ಇಲ್ಲ. ಪಕ್ಷದಲ್ಲಿ ಯಾವುದೇ ಕಿತ್ತಾಟ ಇಲ್ಲ. ಸರ್ಕಾರ ಸುಭದ್ರವಾಗಿದೆ. ಮೂರುವರೆ ವರ್ಷ ಸ್ಥಿರವಾಗಿರುತ್ತದೆ ಎಂದರು.
ಇನ್ನು ಇದೇ ವೇಳೆ ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ, ಸಭೆ ಮಾಡಿದ್ದು ತಪ್ಪು. ಕೆಲವರಿಗೆ ಸಣ್ಣ ಪುಟ್ಟ ಅಪೇಕ್ಷೆ ಇರುತ್ತದೆ. ಹಾಗೆಂದ ಮಾತ್ರಕ್ಕೆ ಅಪೇಕ್ಷೆ ಇರುವುದು ತಪ್ಪಲ್ಲ. ಆದರೆ ಅದನ್ನ ಕೇಳುವುದು ಸರಿಯಾಗಿರಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಹೇಳಿದ್ದೇನು?
ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ಕುರಿತು ಮಾತನಾಡಿದ್ದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ನಮ್ಮ ಲೀಡರ್ ಅಲ್ಲ. ಮುಖ್ಯಮಂತ್ರಿ ಮಾತ್ರ ಅಂತ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರು ನಾಯಕರಲ್ಲ ಅಂತ ಒಪ್ಪಿಕೊಂಡಿಲ್ಲ. ಅವರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಿಜೆಪಿಯವರ ಆಂತರಿಕ ಕಚ್ಚಾಟದಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದ್ದರು.








