ಹರಿಯಾಣ, ಮೇ 31 : ಹರಿಯಾಣ ಸರ್ಕಾರ ಕ್ಯಾನ್ಸರ್, ಕಿಡ್ನಿ ಸಮಸ್ಯೆ ಮುಂತಾದ ಗಂಭೀರ ಸ್ವರೂಪದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತಿಂಗಳಿಗೆ 2250 ರೂಪಾಯಿ ಪಿಂಚಣಿ ನೀಡುವುದಕ್ಕೆ ತೀರ್ಮಾನ ಮಾಡಿದೆ. ಸಚಿವ ಓಂಪ್ರಕಾಶ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹರ್ಯಾಣ ಸರ್ಕಾರ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಅಡಿಯಲ್ಲಿ ಹಿರಿಯರ ಪಿಂಚಣಿ ಜತೆಗೆ ಕ್ಯಾನ್ಸರ್ ರೋಗಿಗಳ ಸೇರ್ಪಡೆಗೆ ಚಿಂತನೆ ನಡೆಸಿರುವ ಬಗ್ಗೆ ಸಚಿವರು ಓಂಪ್ರಕಾಶ್ ಯಾದವ್ ತಿಳಿಸಿದ್ದು, ಪ್ರಸ್ತುತ 28 ಲಕ್ಷಕ್ಕೂ ಹೆಚ್ಚು ಮಂದಿ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಆಡಿಯಲ್ಲಿ ತಿಂಗಳಿಗೆ 2250 ರೂಪಾಯಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೇಂದ್ರ ಸರ್ಕಾರದ ಪ್ರಮುಖ ಯೋಜನೆ, ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಅನುಷ್ಠಾನ ಕುರಿತು ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದು, ಹರ್ಯಾಣದಲ್ಲಿ ಇರುವ ಬೇರೆ ರಾಜ್ಯಗಳ ಕಾರ್ಮಿಕರಿಗೆ ಪ್ರತ್ಯೇಕ ರೇಷನ್ ಕಾರ್ಡ್ ಬೇಕಿಲ್ಲ. ಅವರ ಬಳಿ ಇರುವ ರೇಷನ್ ಕಾರ್ಡ್ ನ ಮೂಲಕವೇ ಆನ್ ಲೈನ್ ನಲ್ಲಿ ರೇಷನ್ ಪಡೆಯುತ್ತಾರೆ ಎಂದು ಸಚಿವ ಓಂಪ್ರಕಾಶ್ ಯಾದವ್ ತಿಳಿಸಿದ್ದಾರೆ. ಆಧಾರ್ ಜೊತೆಗೆ ಜೋಡಣೆಯಾಗಿರುವ ಎಲ್ಲಾ ರಾಜ್ಯಗಳ ರೇಷನ್ ಕಾರ್ಡ್ ದಾರರಿಗೂ ಈ ಯೋಜನೆ ಅನ್ವಯಿಸುವುದು ಎಂದು ಅವರು ತಿಳಿಸಿದರು.








