ಡೆಹ್ರಾಡೂನ್, ಜೂನ್ 1 : ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರ ಪತ್ನಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾದ ಬೆನ್ನಲ್ಲೇ ಸಚಿವರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಚಿವ ಸಪ್ತಲ್ ಮಹಾರಾಜ್ ಸೇರಿದಂತೆ ಅವರ ಸಂಪರ್ಕಕ್ಕೆ ಬಂದಿದ್ದ 22 ಮಂದಿ, ಸಚಿವರ ಪುತ್ರ ಮತ್ತು ಸೊಸೆಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಹಾರಾಜ್ ಅವರ ಪತ್ನಿ ಅಮೃತಾ ರಾವತ್ ಅವರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಸೇರಿದಂತೆ ಅವರ ನಿವಾಸದಲ್ಲಿ ವಾಸಿಸುತ್ತಿದ್ದ 41 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಸಚಿವರ ಖಾಸಗಿ ನಿವಾಸವನ್ನು ಡೆಹ್ರಾಡೂನ್ ಆಡಳಿತ ಮಂಡಳಿಯು ಕ್ವಾರಂಟೈನ್ಗೆ ಒಳಪಡಿಸಿದ್ದು, ಸಚಿವ ಸಪ್ತಲ್ ಮಹಾರಾಜ್ ಮತ್ತು ಅವರ ಪತ್ನಿ ಸೇರಿದಂತೆ ಸುಮಾರು 40 ಮಂದಿಯನ್ನು ಐಸೋಲೇಶನ್ನಲ್ಲಿ ಇರಿಸಲಾಗಿದೆ. ಸಚಿವರ ಸಿಬ್ಬಂದಿಗಳನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಮೇ 29 ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸತ್ಪಾಲ್ ಮಹಾರಾಜ್ ಭಾಗವಹಿಸಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಭಾಗವಹಿಸಿದ್ದರು. ಈಗ ಸಚಿವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.








