ಬೆಂಗಳೂರು : ಒಂದು ಕಾಲದಲ್ಲಿ ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದ, ಮಂಗಳೂರು ಭಾಗದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ ಅಮರ್ ಆಳ್ವಾ ಅವರ ಜೀವನಾಧಾರಿತ ಘಟನೆಗಳನ್ನು ಬೆಳ್ಳಿ ಪರದೆ ಮೇಲೆ ತರಲು ತಯಾರಿ ನಡೆದಿದೆ. ಅಮರ್ ಆಳ್ವಾ ಅವರ ಪಾತ್ರದಲ್ಲಿ ಈಗಾಗಲೇ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ.
ನಟ ರಿಷಬ್ ಶೆಟ್ಟಿ ಅವರ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿದ್ದು, ಇದೀಗ ಮತ್ತೊಂದು ಇಂಟರೆಸ್ಟಿಂಗ್ ಸಿನಿಮಾ ಬಗ್ಗೆ ಅವರು ಗಮನ ಹರಿಸುತ್ತಿದ್ದಾರಂತೆ. ಹೀಗಾಗಿ ಅಮರ್ ಆಳ್ವಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ರಿಷಬ್ ಶೆಟ್ಟಿ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ನಿತೇಶ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ.
ಮಂಗಳೂರು ಭೂಗತ ಲೋಕದಲ್ಲಿ ಅಮರ್ ಆಳ್ವಾ ಡೇರಿಂಗ್ ಪರ್ಸನಾಲಿಟಿಯಾಗಿ ಗುರುತಿಸಿಕೊಂಡಿದ್ದರು. 1992ರಲ್ಲಿ ಅವರನ್ನು ಹತ್ಯೆ ಮಾಡಲಾಯಿತು. ಈ ಎಲ್ಲ ಘಟನೆಗಳನ್ನು ಆಧರಿಸಿ ಸಿನಿಮಾ ತಯಾರಿಸಲಾಗುತ್ತಿದೆ. ಈ ಚಿತ್ರವನ್ನು ಯಾರು ನಿರ್ಮಿಸಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಇನ್ನು ಹೊಸ ಪ್ರಯತ್ನಗಳ ಮೂಲಕವೇ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ, ಇದೀಗ ಅಮರ್ ಆಳ್ವಾ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತು ಕುತೂಹಲ ಮೂಡಿದೆ.








