Heavy Rain | ಬೆಳಗಾವಿಯಲ್ಲಿ 775 ಮನೆಗಳಿಗೆ ಹಾನಿ : ಸೇತುವೆಗಳು ಸಂಚಾರಕ್ಕೆ ಮುಕ್ತ
ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಮಳೆಯ ಜೋರು ಕಡಿಮೆಯಾಗಿದೆ.
ಇತ್ತ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಕೂಡ ಮಳೆರಾಯ ವಿರಾಮ ಪಡೆದುಕೊಂಡಿದ್ದಾನೆ.
ಇದರಿಂದ ಜಿಲ್ಲೆಯ ಸಪ್ತ ನದಿಗಳ ಒಳ ಹರಿವು ತಗ್ಗುತ್ತಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಒಳ ಹರಿವು ಕ್ಷೀಣಿಸುತ್ತಿದೆ.
ಅತ್ತ ಮಹಾರಾಷ್ಟ್ರದ ಜಲಾಶಯಗಳು ಶೇ.60 ರಷ್ಟು ಭರ್ತಿಯಾಗಿವೆ.
ಮಳೆ ಬಿಡುವುಕೊಟ್ಟಿದ್ದರಿಂದ 7 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಖಾನಾಪುರ, ಮೂಡಲಗಿ, ಹುಕ್ಕೇರಿ, ಗೋಕಾಕ ತಾಲೂಕಿನ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ ತಾಲೂಕಿನ 9 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.
ಜುಲೈ 1ರಿಂದ 17ರ ವರೆಗೆ ವಾಡಿಕೆಯಂತೆ 102.9 ಮಿಲಿಮೀಟರ್ ಮಳೆ ಆಗಬೇಕಿತ್ತು.
ಆದ್ರೆ ಜುಲೈ ತಿಂಗಳಿನಲ್ಲಿ 205 ಮಿಲಿಮೀಟರ್ ಮಳೆ ಆಗಿದ್ದು, ವಾಡಿಕೆಗಿಂತಲೂ ಶೇ.99 ರಷ್ಟು ಹೆಚ್ಚಿಗೆ ಮಳೆ ಆಗಿದೆ.
ಇದರಿಂದ ಈವರೆಗೂ ಜಿಲ್ಲೆಯಲ್ಲಿ 775 ಮನೆಗಳಿಗೆ ಹಾನಿಯಾಗಿವೆ.
ಇದರಲ್ಲಿ 3 ಸಂಪೂರ್ಣ ಹಾನಿ, 102 ತೀವ್ರ ಹಾನಿ, 613 ಭಾಗಶಃ ಹಾನಿ, 25 ಗುಡಿಸಲುಗಳಿಗೂ ಹಾನಿಯಾಗಿವೆ.








