Puttur | ಅನಿತಾಳ ಸಾಧನೆ – ರೋಟರಿ ಕ್ಲಬ್ ಪುತ್ತೂರಿನಿಂದ ಮನೆಯ ಕೊಡುಗೆ
ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಪತ್ತೂರಿನ ಪೆರಿಯತ್ತೋಡಿ ನಿವಾಸಿ ಅನಿತಾ ಶೇ 95% ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ವಿಶೇಷತೆ ಏನಿದೆ..? ನೂರಕ್ಕೆ ನೂರು ಅಂಕ ಪಡೆದವರನ್ನ ನಾವು ನೋಡಿದ್ದೇವೆ ಅಂದುಕೊಳ್ಳುತ್ತಿದ್ದರೇ ಮುಂದೆ ಓದಿ..
ಅನಿತಾ ಎಸ್ ಎಸ್ ಎಲ್ ಸಿಯಲ್ಲಿ ಶೇಕಡಾ 95 % ಪಡೆದುಕೊಂಡಿದ್ದಾರೆ. ಆದ್ರೆ ಈಕೆಗೆ ವಾಸಿಸಲು ಮನೆಯಿಲ್ಲ. ಒಂದು ಗುಡಿಸಿಲಲ್ಲಿ ಓದಿ ಈ ಸಾಧನೆ ಮಾಡಿದ್ದಾರೆ.
ಗುಡಿಸಲು ಮುಕ್ತ ಕರ್ನಾಟಕ ಸೇರಿದಂತೆ ಅದೆಷ್ಟೋ ಘೋಷಣೆಗಳ, ಬಡತನ ನಿರ್ಮೂಲನೆಯ ಸವಲತ್ತುಗಳು ಇರುವ ನಾಡು ನಮ್ಮದು. ಇಂತಹ ನಾಡಿನಲ್ಲಿ ಹೀಗೂ ಇರಲಿಕ್ಕೆ ಸಾಧ್ಯವೇ ..?ಎಂದರೆ.. ಸಾಧ್ಯ.!! ಎಂಬುದಕ್ಕೆ ಅನಿತಾ ಆವಾಸಸ್ಥಾನ ಸಾಕ್ಷಿ. 6 ಕಂಬಗಳು ಅದರ ಮೇಲೆ ಹರಿದುಹೋದ ನೀಲಿಬಣ್ಣದ ಟಾರ್ಪಲ್.
ಅದರಲ್ಲಿರುವ ತೂತುಗಳನ್ನುಮುಚ್ಚಿರುವ ಅಮ್ಮನ ಹರಿದ ಸೀರೆಗಳು. ಗೋಡೆ ಇಲ್ಲ. ಕಂಬಕ್ಕೆ ಸುತ್ತಿದ ಪ್ಲಾಸ್ಟಿಕ್ ಬ್ಯಾಗುಗಳ ಕವರ್. ಸೀರೆಯ ತುಂಡುಗಳು. ಗೋಣಿ ಚೀಲಗಳು ..ಹೊರಗೆ ಜೋರು ಮಳೆ ಬಂದರೆ ಒಳಗೆ ನೀರು. ಇದರೊಳಗೆ ಅನಿತಾ, ಅವಳಮ್ಮ ಮತ್ತು ಅಕ್ಕ ಲಾವಣ್ಯ ವಾಸಿಸುತ್ತಿದ್ದಾರೆ.

ಈ ಗುಡಿಸಲಲ್ಲಿ ವಿದ್ಯುತ್ ಇಲ್ಲ ! ಒಂದು ಮೂಲೆಯಲ್ಲಿ ಸಣ್ಣ ಒಲೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಅನಿತಾ ಎಸ್ ಎಸ್ ಎಲ್ ಸಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಇದೀಗ ಸರಕಾರಿ ಕಾಲೇಜಿನಲ್ಲಿ ಪಿಯುಸಿಗೆ ಸೇರ್ಪಡೆಗೊಂಡಿದ್ದಾಳೆ.
ದಾನಿಗಳೊಬ್ಬರು ಶಾಲೆಯ ಶುಲ್ಕ ಭರಿಸಿದ್ದಾರೆ .ಎರಡು ಜೊತೆ ಸಮವಸ್ತ್ರ ಕೊಟ್ಟಿದ್ದಾರೆ. ಅಂದಹಾಗೆ ಈಕೆಯ ಅಕ್ಕ ಲಾವಣ್ಯ ಇದೇ ಗುಡಿಸಲಲ್ಲಿ ಓದಿ BEd ಮಾಡಿ ಮೊನ್ನೆ ಮೊನ್ನೆ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದ್ದಾರೆ.
ಈಗ….. ಇದೇ ಅನಿತಾ ಮತ್ತು ಅವಳ ಅಮ್ಮನ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿದೆ. ಅನಿತಾಳ ಶಿಕ್ಷಕ ಗೀತಾಮಣಿ ಅವರ ಮೂಲಕ ವಿಷಯ ತಿಳಿದ ರೋಟರಿಕ್ಲಬ್ ಪುತ್ತೂರು ವತಿಯಿಂದ ಸುಮಾರು 8 ರಿಂದ 9 ಲಕ್ಷ ವೆಚ್ಚದ ಆರ್ ಸಿ ಸಿ ಮನೆ ನಿರ್ಮಾಣ ಆಗಿದೆ.
ಜುಲೈ. 1. 2022 ಮನೆಯ ಕೀಲಿಕೈ ಅನಿತಾಳ ಅಮ್ಮ ಸುನಂದರಿಗೆ ಹಸ್ತಾಂತರಿಸಲಾಗಿದೆ. ಬಳಿಕ ರೋಟರಿ ಕ್ಲಬ್ ಪುತ್ತೂರು ವತಿಯಿಂದಲೇ ಗೃಹಪ್ರವೇಶ ಕಾರ್ಯಕ್ರಮವು ನಡೆದಿದೆ.

ಪ್ರತಿನಿತ್ಯ ಸುಮಾರು ಹತ್ತು ಕಿಲೋ ಮೀಟರ್ ದೂರ, ರೋಟೆರಿಯನ್ ಸುಜಿತ್ ರೈ ಅವರು ತನ್ನ ವ್ಯವಹಾರದ ನಡುವೆಯೂ ಬಿಡುವು ಮಾಡಿಕೊಂಡು ಓಡಾಡಿ ಮನೆ ನಿರ್ಮಾಣದ ಪ್ರತಿಹಂತದಲ್ಲೂ ಮೇಲ್ವಿಚಾರಣೆ ಮಾಡಿದ್ದಾರೆ.
ಪ್ರತಿ ಹಂತದಲ್ಲೂ ಗುಣಮಟ್ಟ ಕಾಯ್ದುಕೊಂಡಿದ್ದಾರೆ ರೋಟರಿ ಅಂಗಸಂಸ್ಥೆ,ರೋಟರ್ಯಾಕ್ಟ್ ನ ಅಧ್ಯಕ್ಷ ,ಕಾರ್ಯದರ್ಶಿ ಮತ್ತು ಸದಸ್ಯರು ಶ್ರಮದಾನದ ಮೂಲಕ ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ ” ಸಮಾಜಸೇವೆ” ಎಂಬ ಅನನ್ಯ ಪದಕ್ಕೆ ಮೌಲ್ಯ ತಂದಿದ್ದಾರೆ.








