ಎಮ್ಮೆಯಿಂದ ಬಸ್ ನಿಲ್ದಾಣವನ್ನ ಉದ್ಘಾಟಿಸಿ ಗ್ರಾಮಸ್ಥರ ವಿನೂತನ ಪ್ರತಿಭಟನೆ…
ಸರ್ಕಾರದಿಂದ ಕಟ್ಟಿದ ಕಟ್ಟಡಗಳಿಗೆ ರಾಜಕಾರಣಿಗಳು ಉದ್ಘಾಟನೆ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ವಿಶೇಷ ಪ್ರಕರಣದಲ್ಲಿ ಎಮ್ಮೆಯಿಂದ ಉದ್ಘಾಟನೆ ಮಾಡಲಾಗಿದೆ. ಗ್ರಾಮಸ್ಥರು ಬಸ್ ನಿಲ್ದಾಣವನ್ನ ಎಮ್ಮೆಯಿಂದ ಉದ್ಘಾಟಿಸುವ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಲು ಮುಂದಾಗಿದ್ದಾರೆ.
ಗದಗ ಜಿಲ್ಲೆಯ ಬಾಳೆಹೊಸೂರು ಗ್ರಾಮಸ್ಥರು ತಮಗೊಂದು ಬಸ್ ತಂಗುದಾಣ ನೀಡುವಂತೆ ಅಧಿಕಾರಿಗಳಿಗೆ ಬಹುದಿನಗಳಿಂದ ಮನವಿ ಮಾಡುತ್ತಿದ್ದರು. ಆದರೆ ಅಧಿಕಾರಿಗಳು ಕ್ಯಾರೇ ಮಾಡಿರಲಿಲ್ಲ. ಅಧಿಕಾರಿಗಳ ಗಮನ ಸೆಳೆಯಲು ಚಪ್ಪರದದಿಂದ ಮಾಡಿದ ಬಸ್ ನಿಲ್ದಾಣವನ್ನ ಕಟ್ಟಿ ಗ್ರಾಮಸ್ಥರು ಎಮ್ಮೆ ಕರೆತಂದು ಈ ರೀತಿ ವಿಶಿಷ್ಟತೆ ತೋರಿಸಿದ್ದಾರೆ.
ಬಸ್ ನಿಲ್ದಾಣ ಉದ್ಘಾಟಿಸುವ ವೇಳೆ ಗ್ರಾಮಸ್ಥರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಎಮ್ಮೆ ನೋಡುಗರ ಗಮನ ಸೆಳೆಯಿತು. ಇಲ್ಲಿ ಮೊದಲ ಬಸ್ ನಿಲ್ದಾಣವನ್ನು ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿದರೂ, ಯಾರೂ ಕೂಡ ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲವಂತೆ. ಇದರಿಂದ ರೋಸಿಹೋದ ಗ್ರಾಮಸ್ಥರು ಈ ರೀತಿಯಾಗಿ ವಿನೂತನವಾಗಿ ಪ್ರತಿಭಟನೆ ಮಾಡಿದರು.
ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದಿದ್ದಾಗ ಗ್ರಾಮಸ್ಥರು ಒಂದಿಷ್ಟು ಹಣ ಸಂಗ್ರಹಿಸಿ ತೆಂಗಿನ ಗರಿಗಳಿಂದ ತಾತ್ಕಾಲಿಕ ನಿಲ್ದಾಣ ನಿರ್ಮಿಸಿಕೊಂಡರು. ಎಮ್ಮೆಯನ್ನು ತಂದು ಉದ್ಘಾಟನೆ ಮಾಡಿದರು.
ಬಸ್ ತಂಗುದಾಣವನ್ನು ಎಮ್ಮೆ ಉದ್ಘಾಟಿಸಿದ ನಂತರ, ಪ್ರತಿನಿಧಿಗಳ ನಿರ್ಲಕ್ಷ್ಯದ ಹಿಂದೆ ಕಾರಣವನ್ನು ಕೇಳುವ ವೀಡಿಯೊಗಳು ವೈರಲ್ ಆಗಿವೆ. ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ, ನಾವು ಈ ವಿಷಯವನ್ನು ಶೀಘ್ರದಲ್ಲೇ ಪರಿಶೀಲಿಸುತ್ತೇವೆ. ಗ್ರಾಮಸ್ಥರಿಗೆ ಹೊಸ ಬಸ್ ತಂಗುದಾಣವನ್ನು ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.








