ಹಿರಿಯ ಚಿಂತಕ, ವಿಮರ್ಶಕ ಜಿ. ರಾಜಶೇಖರ್ ನಿಧನ..
ಹಿರಿಯ ಚಿಂತಕರಾಗಿ ಸಾಹಿತ್ಯ ವಿಮರ್ಶಕರಾಗಿ, ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಜಿ. ರಾಜಶೇಖರ್ (75) ಅನಾರೋಗ್ಯದಿಂದ ಬುಧವಾರ ರಾತ್ರಿ 11:15 ಕ್ಕೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
2019ರಿಂದ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ರಾಜಶೇಖರ್ ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ ಮಂತಾದವು ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.
ಕನ್ನಡದ ಹಿರಿಯ ವಿಮರ್ಶಕ, ನೇರ-ನಿಷ್ಠುರ ನಡವಳಿಕೆಯ ಪ್ರಖರ ಚಿಂತಕ ಮತ್ತು ಸೌಹಾರ್ದ ಬದುಕಿನ ಹೋರಾಟಗಾರ ಜಿ.ರಾಜಶೇಖರ್ ಅಗಲಿಕೆ ನಮ್ಮೆಲ್ಲರ ಪಾಲಿಗೆ ತುಂಬಿಕೊಳ್ಳಲಾಗದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿ ಸಂತಾಪ ವ್ಯಕ್ತ ಪಡಿಸಿದ್ದಾರೆ.
Famous Kannada thinker writer G Rajashekar is no more








