ಶ್ರೀಲಂಕಾದ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ
ಶ್ರೀಲಂಕಾದ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಜುಲೈ 20 ರಂದು ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಮುಖೇನ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
73 ವರ್ಷದ ವಿಕ್ರಮಸಿಂಘೆ ಅವರಿಗೆ ಶ್ರೀಲಂಕಾದ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರು ಪ್ರಮಾಣ ವಚನ ಬೋಧಿಸಿದರು. ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ದೇಶವನ್ನು ಈ ಬಿಕ್ಕಟ್ಟಿನಿಂದ ಹೊರತರುವುದು ವಿಕ್ರಮಸಿಂಘೆ ಅವರ ಮುಂದಿರುವ ದೊಡ್ಡ ಸವಾಲು ಮತ್ತು ಅಗ್ನಿಪರೀಕ್ಷೆ.
225 ಸದಸ್ಯರ ಶ್ರೀಲಂಕಾ ಸಂಸತ್ತಿನಲ್ಲಿ ನಿನ್ನೆ ವಿಕ್ರಮಸಿಂಘೆ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ವಿಕ್ರಮಸಿಂಘೆ 134 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಮತ್ತು ಭಿನ್ನಮತೀಯ ಆಡಳಿತ ಪಕ್ಷದ ನಾಯಕ ಡಲ್ಲಾಸ್ ಅಲಹಪ್ಪರುಮಾ 82 ಮತಗಳನ್ನು ಪಡೆದರು.
ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಸಂಸತ್ತಿನ ಸಭಾಂಗಣದ ಹೊರಗೆ ಪ್ರಮಾಣವಚನ ಸ್ವೀಕರಿಸಲು ಸ್ಪೀಕರ್ಗೆ ಅನುಮತಿ ಕೋರಿದರು. ಶ್ರೀಲಂಕಾವನ್ನು ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡುವುದಾಗಿ ವಿಕ್ರಮ ಸಿಂಘೆ ಪ್ರತಿಪಕ್ಷಗಳಿಗೆ ಭರವಸೆ ನೀಡಿದರು.
ಗೋತಬಯ ರಾಜಪಕ್ಸೆ ದೇಶದಿಂದ ಪಲಾಯನ ಮಾಡಿದ ನಂತರ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಯಿತು, ನಂತರ ರಾಜೀನಾಮೆ ನೀಡಿದರು. ಅವರು ದೇಶದ ಸಂವಿಧಾನದ ಪ್ರಕಾರ ಸಂಸತ್ತಿನಿಂದ ಚುನಾಯಿತರಾದ ಮೊದಲ ಶ್ರೀಲಂಕಾ ಅಧ್ಯಕ್ಷರಾಗಿದ್ದಾರೆ.
Ranil Wickremesinghe sworn in as President of Sri Lanka








