ಹೊಸದಿಲ್ಲಿ, ಜೂನ್ 2 : ಭಾರತದಲ್ಲಿ ಆಂಟಿವೈರಲ್ ರೆಮ್ ಡೆಸಿವಿರ್ ಔಷಧಿಯನ್ನು ಕೊರೋನಾ ಸೋಂಕಿನ ತುರ್ತು ಚಿಕಿತ್ಸೆ ಸಂದರ್ಭಗಳಲ್ಲಿ ಐದು ದಿನಗಳವರೆಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ. ಕೊರೋನಾ ವೈರಸ್ ಸೋಂಕಿನ ಚಿಕಿತ್ಸೆಯಲ್ಲಿ ಆಂಟಿವೈರಲ್ ಔಷಧಿ ‘ರೆಮ್ ಡೆಸಿವಿರ್’ ಭರವಸೆ ಮೂಡಿಸಿದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದ್ದವು.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ), ಅನುಮೋದನೆಯ ಸಮಯದಲ್ಲಿ ಪ್ರಸ್ತುತಪಡಿಸಿದ ಪುರಾವೆಗಳ ಆಧಾರದ ಮೇಲೆ ಔಷಧದ ಬಳಕೆಯನ್ನು 10 ದಿನಗಳವರೆಗೆ ವಿಸ್ತರಿಸದಿರಲು ನಿರ್ಧರಿಸಲಾಗಿದೆ. ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್‌ಫೆಕ್ಚಿಯಸ್ ಡಿಸೀಜಸ್ (ಎನ್‌ಐಎಐಡಿ) ಪ್ರಾಯೋಜಿತ ಕ್ಲಿನಿಕಲ್ ಟ್ರಯಲ್, ರೆಮ್‌ಡೆಸಿವಿರ್ ಔಷಧಿ ಕೊರೊನಾ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿತ್ತು.
ರೆಮ್ ಡೆಸಿವಿರ್ ಚುಚ್ಚುಮದ್ದಿನ ಔಷಧಿಯನ್ನು ಗರಿಷ್ಟ ಐದು ದಿನಗಳ ವರೆಗೆ ಮಾತ್ರ ಚಿಕಿತ್ಸೆಗೆ ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಡಾ ವಿ.ಜಿ.ಸೋಮಾನಿ ಅನುಮೋದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ಬಯೋಫಾರ್ಮಾ ದೈತ್ಯ ಗಿಲ್ಯಾಡ್ ಸೈನ್ಸಸ್ ತಯಾರಿಸಿದ ಔಷಧಿಯನ್ನು ಮುಂಬೈ ಮೂಲದ ಕ್ಲೈನೆರಾ ಗ್ಲೋಬಲ್ ಆಮದು ಮಾಡಿಕೊಳ್ಳಲಿದೆ.
ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ವಯಸ್ಕರು ಮತ್ತು ಮಕ್ಕಳಲ್ಲಿ ಆರೋಗ್ಯ ತೀವ್ರ ಹದಗೆಟ್ಟ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ರೆಮ್ ಡೆಸಿವಿರ್ ಅನ್ನು ಬಳಸಲು ಭಾರತದ ಉನ್ನತ ಔಷಧ ನಿಯಂತ್ರಣ ಸಂಸ್ಥೆ ಸೋಮವಾರ ಅನುಮೋದನೆ ನೀಡಿದೆ. ಕಂಪನಿಯು ಪ್ರಸ್ತುತಪಡಿಸಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ, ಐದಕ್ಕಿಂತ ಹೆಚ್ಚು ದಿನಗಳವರೆಗೆ ರೆಮ್ ಡೆಸಿವಿರ್ ಅನ್ನು ಸೇವಿಸುವುದರಿಂದ ಯಾವುದೇ ಪ್ರಯೋಜನಕಾರಿ ಪರಿಣಾಮಗಳಿಲ್ಲ.
ವಿಸ್ತೃತ ಬಳಕೆಯೊಂದಿಗೆ ಮರಣ ಪ್ರಮಾಣ ಹೆಚ್ಚಾಗುವ ಅಪಾಯವೂ ಇದೆ, ಆದ್ದರಿಂದ ಇತರ ದೇಶಗಳಿಗೆ ಹೋಲಿಸಿದರೆ ಪ್ರಾಧಿಕಾರವು ತನ್ನ ನಿರ್ಧಾರಗಳೊಂದಿಗೆ ಹೆಚ್ಚು ಕಠಿಣವಾಗಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಔಷಧಿಯ ಅನುಮೋದನೆಯು ನಮ್ಮ ದೇಶದಲ್ಲಿ ಸಾಮಾನ್ಯ ಸ್ವಯಂಪ್ರೇರಿತ ಪರವಾನಗಿ ಹೊಂದಿರುವವರಿಗೆ ರೆಮ್ ಡೆಸಿವಿರ್ ತಯಾರಿಸಲು ದಾರಿ ಮಾಡಿಕೊಡುತ್ತದೆ. ಔಷಧದ ಬಳಕೆಯನ್ನು ಐದು ದಿನಗಳಿಗೆ ನಿರ್ಬಂಧಿಸುವುದರಿಂದ ರೋಗಿಗಳಿಗೂ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಆಂಟಿವೈರಲ್ ಗುಣ ಹೊಂದಿರುವ ಈ ಔಷಧದ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಆಗ್ರಹಿಸಿದ್ದು, ಭಾರತವೂ ಡಬ್ಲ್ಯು.ಎಚ್.ಒ. ಸಹಯೋಗಿ ರಾಷ್ಟ್ರವಾಗಿರುವುದರಿಂದ ಭಾರತಕ್ಕೆ ಒಂದು ಸಾವಿರ ರೆಮ್ ಡೆಸಿವಿರ್ ಔಷಧಗಳ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದೆ.
ರೆಮ್ ಡೆಸಿವಿರ್ ಔಷಧಗಳ ಬಳಕೆಯನ್ನು ಆಯ್ದ ರಾಜ್ಯಗಳ ಆಯ್ದ ನಗರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಭಾರತದ ಐಸಿಎಂಆರ್ ಹಾಗೂ ಸಿಎಸ್‌ಐಆರ್ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ.








