ಹೊಸದಿಲ್ಲಿ, ಜೂನ್ 2 : ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳದ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇಂದ್ರ ತನಿಖಾ ತಂಡ(CBI)ದ ಇಬ್ಬರು ಅಧಿಕಾರಿಗಳಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಹೊರಗಿನ ಜನರ ಸಂಪರ್ಕದಿಂದ ಅಧಿಕಾರಿಗಳಿಗೆ ಕೊರೊನಾ ವೈರಸ್ ಸೋಂಕು ತಗಲಿರಬಹುದು ಎಂದು ಅಂದಾಜಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಬ್ಬರೂ ಸೋಂಕಿತ ಅಧಿಕಾರಿಗಳನ್ನು 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಕೊರೊನಾ ವೈರಸ್ ಸೋಂಕು ಹರಡದಂತೆ ಸಿಬಿಐ ಅಧಿಕಾರಿಗಳ ಕೇಂದ್ರ ಕಚೇರಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಕೇಂದ್ರ ಕಚೇರಿಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಯಾನಿಟೈಸರ್ ಗಳನ್ನು ಇರಿಸಲಾಗಿದೆ. ಕಚೇರಿಗೆ ಆಗಮಿಸುವ ಪ್ರತಿಯೊಬ್ಬ ಅಧಿಕಾರಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿ, ಬಳಿಕ ಆರೋಗ್ಯ ತಪಾಸಣೆ ನಡೆಸಿ, ಕೈಗಳನ್ನು ಸ್ಯಾನಿಟೈಸರ್ ಗಳಿಂದ ಶುದ್ಧಗೊಳಿಸಿದ ನಂತರವಷ್ಟೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಕೇಂದ್ರ ತನಿಖಾ ತಂಡ(CBI)ದ ಇಬ್ಬರು ಅಧಿಕಾರಿಗಳಿಗೂ ವೈದ್ಯಕೀಯ ತಪಾಸಣೆ ನಡೆಸುವಾಗ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ದೆಹಲಿಯಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದ ವಿಭಾಗದ ಸಿಬಿಐ ಅಧಿಕಾರಿಗಳ ಕೇಂದ್ರ ಕಚೇರಿಯಲ್ಲಿ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಇದರ ನಡುವೆಯೂ ಇಬ್ಬರು ಅಧಿಕಾರಿಗಳಿಗೆ ಸೋಂಕು ತಗುಲಿದೆ. ಇದೀಗ ಕಚೇರಿಯ ಹಲವೆಡೆ ಸ್ಯಾನಿಟೈಸ್ ಕಾರ್ಯವನ್ನು ನಡೆಸಲಾಗುತ್ತಿದ್ದು, ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಬಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಇಬ್ಬರು ಅಧಿಕಾರಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಕೇಂದ್ರ ತನಿಖಾ ತಂಡ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.