ನ್ಯಾಷನಲ್ ಹೆರಾಲ್ಡ್ ಪ್ರಕರಣ – ಜುಲೈ 25 ಕ್ಕೆ ಎರಡನೇ ಸುತ್ತಿನ ವಿಚಾರಣೆಗೆ ಸೋನಿಯಾಗೆ ED ಸಮನ್ಸ್ …
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜುಲೈ 25 ರಂದು ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಪ್ರತಿಭಟನೆಯ ನಡುವೆಯೂ 73 ವರ್ಷದ ಸೋನಿಯಾ ಗಾಂಧಿ ಅವರನ್ನು ನಿನ್ನೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಜು.26 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಅವರ ಒತ್ತಾಯದ ಮೇರೆಗೆ ಜು.25ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೋವಿಡ್‌ನಿಂದ ಚೇತರಿಸಿಕೊಂಡಿರುವ ಸೋನಿಯಾ ಗಾಂಧಿ ಅವರನ್ನು ಗುರುವಾರ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಬಳಿಕ ಆಕೆಯ ಮನವಿ ಮೇರೆಗೆ ವಿಚಾರಣೆ ಅಂತ್ಯಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಮುಂದಿನ ವಿಚಾರಣೆ ಇಲ್ಲ ಎಂದು ಇಡಿ ಸೋನಿಯಾ ಗಾಂಧಿಗೆ ತಿಳಿಸಿರುವುದಾಗಿ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ. ಇತರ ಯಾವುದೇ ವಿಚಾರಣೆಯಿದ್ದರೆ ಅಗತ್ಯವಿದ್ದರೆ ರಾತ್ರಿ 8 ಗಂಟೆಯಲ್ಲ, 9 ಗಂಟೆಯವರೆಗೂ ಉತ್ತರಿಸಲು ಸೋನಿಯಾ ಗಾಂಧಿ ಸಿದ್ದರಿದ್ದರು ಎಂದು ರಮೇಶ್ ಟ್ವೀಟರ್ ಫೋಸ್ಟ್ ನಲ್ಲಿ ತಿಳಿಸಿದ್ದಾರೆ.








