ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ – 6 ಮಂದಿ ಸಾವು…
ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ ಸಂಭವಿಸಿ 6 ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಸರ್ನ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಅಮಿನಾ ಖಾತುನ್ (55), ಅವರ ಇಬ್ಬರು ಮಕ್ಕಳಾದ ಮುಲಾಜಿಮ್ (35) ಮತ್ತು ಸಬೀರ್ ಅಲಿ (22), ಮುಲಾಜಿಮ್ ಅವರ ಪುತ್ರಿ ಯಾಸ್ಮಿನ್ (8) ಮತ್ತು ಮಗ ಶಹಜಾದ್ (5) ಎಂದು ಗುರುತಿಸಲಾಗಿದೆ. ಆರನೇ ಶವದ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಳುಗಳನ್ನ ಖೈರಾದ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ರವಾನಿಸಲಾಗಿತ್ತು. ನಂತರ ಉತ್ತಮ ಚಿಕಿತ್ಸೆಗಾಗಿ ಛಾಪ್ರಾದ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಮಸೀದಿಯ ಪಕ್ಕದಲ್ಲಿರುವ ಖೋಡೈಬಾಗ್ ಗ್ರಾಮದ ಮೊಹಮ್ಮದ್ ರೆಯಾಜು ಮಿಯಾನ್ ಎಂಬುವರ ಮನೆಯಲ್ಲಿ ಬೆಳಗ್ಗೆ 11.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಪೋಟದ ತೀವ್ರತೆಗೆ ಮೂರು ಅಂತಸ್ಥಿನ ಕಟ್ಟಡ ನೆಲಸಮವಾಗಿದೆ.
ಸುಮಾರು 3 ಕಿ.ಮೀ ವ್ಯಾಪ್ತಿಯಲ್ಲಿ ಸ್ಫೋಟದ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಮಾರು 6 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿವೆ.








