ಮುಂಬೈ, ಜೂನ್ 2 : ನಿನ್ನೆ ನಿಧನರಾದ ಸಂಗೀತ ಸಂಯೋಜಕ ಮತ್ತು ಗಾಯಕ ವಾಜಿದ್ ಖಾನ್ ಅವರ ತಾಯಿ ರಜಿನಾ ಅವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಅವರು ಆಸ್ಪತ್ರೆಯಲ್ಲಿ ಗಾಯಕ ವಾಜಿದ್ ಖಾನ್ ಅವರ ಆರೈಕೆಯಲ್ಲಿ ನಿರತರಾಗಿದ್ದರು. ಸಂಗೀತ ಸಂಯೋಜಕ ಮತ್ತು ಗಾಯಕ ವಾಜಿದ್ ಖಾನ್ ಮೂತ್ರಪಿಂಡ ಮತ್ತು ಗಂಟಲಿನ ಸೋಂಕಿನಿಂದ ಬಳಲುತ್ತಿದ್ದು ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ವೇಳೆ ಪರೀಕ್ಷಿಸಿದಾಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಗನನ್ನು ನೋಡಿಕೊಳ್ಳಲು ರಜಿನಾ ಮುಂಬೈನ ಉಪನಗರ ಚೆಂಬೂರ್ ನಲ್ಲಿರುವ ಸುರಾನಾ ಸೇಥಿಯಾ ಆಸ್ಪತ್ರೆಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗಾಯಕ ವಾಜಿದ್ ಖಾನ್ ಸೋಮವಾರ ನಸುಕಿನ ವೇಳೆ ಮೃತಪಟ್ಟಿದ್ದರು.
ಸಾಜಿದ್-ವಾಜಿದ್ ಅವರ ತಾಯಿಯ ಆರೋಗ್ಯ ಈಗ ಉತ್ತಮವಾಗಿದ್ದು, ಅವರ ಸ್ಥಿತಿ ಸುಧಾರಿಸಿದೆ. ವಾಜಿದ್ ಅವರ ಸಹೋದರ ಸಾಜಿದ್ ಖಾನ್, ವಾಜಿದ್ ಅವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದರೂ ಅವರು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ವರ್ಸೋವಾ ಸ್ಮಶಾನದಲ್ಲಿ ವಾಜಿದ್ ಅವರ ಅಂತ್ಯಕ್ರಿಯೆ ಮಾಡಲಾಗಿದ್ದು ನಿಕಟ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು. ವಾಜಿದ್ ಅವರ ಮೃತದೇಹವನ್ನು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಮಾಧಿ ಮಾಡಲಾಯಿತು.
ಲಾಕ್‌ಡೌನ್ ಮತ್ತು ಕೋವಿಡ್ ಸಮಸ್ಯೆಯಿಂದಾಗಿ, ಅಂತ್ಯಕ್ರಿಯೆಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಭದ್ರತೆ ಮತ್ತು ಬ್ಯಾರಿಕೇಡ್‌ಗಳು ಇದ್ದವು. ಸಹೋದರ ಸಾಜಿದ್ ಮತ್ತು ಉದ್ಯಮದ ಸ್ನೇಹಿತರು ಸೇರಿದಂತೆ ನಿಕಟ ಕುಟುಂಬ ಮಾತ್ರ ಹಾಜರಿದ್ದರು ಎಂದು ಸಂಗೀತಗಾರನ ಆಪ್ತ ಮೂಲಗಳು ತಿಳಿಸಿದೆ.








