ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ v/s ಸುಧಾಕರ್ ಫೈಟ್
ಚಿಕ್ಕಬಳ್ಳಾಪುರ : ನಂದಿಯ ಬೋಗನಂದೀಶ್ವರ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವಂತೆ ಮಾಜಿ ಶಾಸಕ ಸುಧಾಕರ್, ಸಚಿವ ಡಾ.ಕೆ.ಸುಧಾಕರ್ ಗೆ ಅಂಥಾಹ್ವಾನ ನೀಡಿದ್ದಾರೆ.
ನಿನ್ನೆ ಸಚಿವ ಡಾ.ಕೆ.ಸುಧಾಕರ್ ಅವರು, ಮಾಜಿ ಶಾಸಕ ಸುಧಾಕರ್ ಅಕ್ರಮ ಬಯಲು ಮಾಡುವುದಾಗಿ ಹೇಳಿದ್ದರು. ಇದಕ್ಕೆ ಟಾಂಗ್ ನೀಡುತ್ತಾ ಇಂದು ಮಾಜಿ ಶಾಸಕ ಸುಧಾಕರ್ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಸುಧಾಕರ್, ನನ್ನ ಹತ್ತಿರ ಹಣ ಇಲ್ಲ. ಆತ ನನ್ನ ಬಗ್ಗೆ ಅಷ್ಟು ಕೋಟಿ ಇಷ್ಟು ಕೋಟಿ ಅಂತ ಹೇಳುತ್ತಿದ್ದಾನೆ, ತೆಗಿಯಲಿ. ಕಳೆದ ಉಪ ಚುನಾವಣೆ ಸಮಯದಲ್ಲಿ ಬೆಂಗಳೂರಿನಿಂದ ಏಜೆಂಟ್ಸ್ ಕರೆದುಕೊಂಡು ಬಂದು ಹಣ ಹಂಚಿದ್ದಾರೆ. ಪೊಲೀಸ್ ಜೀಪುಗಳ ಮೂಲಕ ಹಣ ಸಾಗಿಸಿ ಜನರಿಗೆ ಹಣ ಹಂಚಿದ್ದಾನೆ ಎಂದು ಆರೋಪಿಸಿದ್ದಾರೆ.

ಬ್ಲಾಕ್ ಮೇಲ್ ಮಾಡಿ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಅದ್ಯಕ್ಷರಾದ್ರಿ. ಉತ್ತಮವಾಗಿ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿಗಳಾದ ಅನಿರುದ್ಧ್ ಶ್ರವಣ್ . ವೆಂಕಟೇಶ್ ರನ್ನು ವರ್ಗಾವಣೆ ಮಾಡಿಸಿದ್ರಿ. ಚಿಕ್ಕಬಳ್ಳಾಪುರ ಜನತೆ ಇಂತ ವ್ಯವಸ್ಥೆಯಿಂದ ಹೊರ ಬರಬೇಕು. ನಿಮ್ಮ ಕುಟುಂಬದ ಸಮಸ್ಯೆ ಕಾರ್ಯಗಳಲ್ಲಿ ನಾನು ಭಾಗಿಯಾಗಿದ್ದೇನೆ. ಅಂದು ನೀವು ಬಡ ಮೇಷ್ಟ್ರು ಮಗನಾಗಿದ್ರೀ, ಈಗ ಎಷ್ಟು ಕೋಟಿ ಆಸ್ತಿಯ ಒಡೆಯ ನೀನು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
12 ವರ್ಷ ಎಂಬಿಬಿಎಸ್ ಓದಿದ್ರಿ ಒಂದು ದಿನ ಸ್ಟೆಟಸ್ಕೋಪ್ ಹಿಡಿದಿದ್ದು ನೋಡಲಿಲ್ಲ. ನಾನು ದಂತ ವೈದ್ಯನಾಗಿ ಪ್ರೋಫೆಸರ್ ಆಗಿ ಕೆಲಸ ಮಾಡಿದ್ದೇನೆ. ನೀವು ಯಾವಾಗ ಡಾಕ್ಟರ್ ಆಗಿದ್ದೀರೀ.. ಯಾವಾಗ ವೈದ್ಯನಾಗಿ ಕೆಲಸ ಮಾಡಿದ್ರಿ ಹೇಳಿ ಎಂದು ಪ್ರಶ್ನಿಸಿದ ಸುಧಾಕರ್, ನಿಮ್ಮ ಇಂಚಿಂಚೂ ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಬಯಲು ಮಾಡುವೆ. ಎಲ್ಲಾ ವಿಚಾರ ನಂದಿಯ ಬೋಗನಂದೀಶ್ವರ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.








