ಹೈದರಾಬಾದ್ : ಕೊರೊನಾ ಲಾಕ್ ಡೌನ್ ಮಧ್ಯೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಸೂಪರ್ ಸ್ಟಾರ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಪ್ರಿನ್ಸ್ ನಯಾ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಲಾಕ್ ಡೌನ್ ನಿಂದಾಗಿ ಸಿನಿಮಾ ಕೆಲಸಗಳೆಲ್ಲಾ ಸ್ಥಗಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಮಹೇಶ್ ಬಾಬು ಹೊಸ ಸಿನಿಮಾ ‘ಸರ್ಕಾರು ವಾರಿ ಪಾಟ’ ದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪ್ರಿನ್ಸ್ ರಗಡ್ ಲುಕ್ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಸರ್ಕಾರು ವಾರಿ ಪಾಟದ ಫಸ್ಟ್ ಲುಕ್ ಪೋಸ್ಟರ್ ನ್ನು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ. ಫಸ್ಟ್ ಲುಕ್ ದಲ್ಲಿ ಮಹೇಶ್ ಬಾಬು ಮುಖ ತೋರಿಸಿಲ್ಲ. ಬದಲಿಗೆ ಕತ್ತು ಹಾಗೂ ತಲೆಯ ಹಿಂಭಾಗವನ್ನು ಮಾತ್ರ ತೋರಿಸಲಾಗಿದೆ. ಅಲ್ಲದೆ ಕತ್ತಿನಲ್ಲಿ ಒಂದು ರೂ. ಹಳೆಯ ನಾಣ್ಯದ ಟ್ಯಾಟು ಸಹ ಕಾಣುತ್ತದೆ. ಪೋಸ್ಟರ್ ಚಿತ್ರ ಹಾಕಿ ಬ್ಲಾಕ್ ಬಸ್ಟರ್ ಸ್ಟಾರ್ಟ್ ಫಾರ್ ಅನದರ್ ಹ್ಯಾಟ್ರಿಕ್ ಎಂದು ಬರೆದುಕೊಂಡಿದ್ದಾರೆ ಮಹೇಶ್.
ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದ್ದು, ಮಹೇಶ್ ಬಾಬು ಮೂರು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಹಿನ್ನೆಲೆ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆಯಂತೆ.
ಇನ್ನೂ ವಿಶೇಷತೆ ಎಂದರೆ ಸಿನಿಮಾದ ಶೇ.20ರಷ್ಟು ಭಾಗ ಕ್ಯಾಸಿನೋ ಅಡ್ಡಾದಲ್ಲೇ ಶೂಟ್ ಆಗಲಿದೆಯಂತೆ. ಈ ಭಾಗವನ್ನು ಚಿತ್ರೀಕರಿಸಲು ಚಿತ್ರತಂಡ ವಿದೇಶಕ್ಕೆ ತೆರಳಬೇಕಿತ್ತಂತೆ ಆದರೆ ಕೊರೊನಾ ಹಿನ್ನೆಲೆ ವಿದೇಶಕ್ಕೆ ತೆರಳುವಂತಿಲ್ಲ. ಅಲ್ಲದೆ ಕೊರೊನಾ ಹಿನ್ನೆಲೆ ಕ್ಯಾಸಿನೋ ಅಡ್ಡಾದಲ್ಲಿ ಚಿತ್ರೀಕರಿಸುವುದು ಅಪಾಯಕಾರಿ. ಹೀಗಾಗಿ ಚಿತ್ರತಂಡ ರಾಮೋಜಿ ರಾವ್ ಸ್ಟುಡಿಯೋದಲ್ಲಿ ಬೃಹತ್ ಸೆಟ್ ನಿರ್ಮಿಸುತ್ತಿದೆ.
ಅಂದಹಾಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಗೀತಾ ಗೋವಿಂದಂ ಸಿನಿಮಾ ನಿರ್ದೇಶಿಸಿದ್ದ ಪರಶುರಾಮ್ ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಂಗತಿ ಸಹ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.








