ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ಕೊರೊನಾ ಆರ್ಭಟ ತುಸು ಜೋರಾಗಿದೆ. ಈ ಮಧ್ಯೆ ಬೆಂಗಳೂರಿನ ನಾಗರಬಾವಿಯಲ್ಲಿ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ನಾಗರಬಾವಿ 2ನೇ ಹಂತ, ನಾಲ್ಕನೇ ಅಡ್ಡರಸ್ತೆ ಸೀಲ್ ಡೌನ್ ಮಾಡಲಾಗಿದೆ.
29 ವರ್ಷದ ವ್ಯಕ್ತಿಗೆ ಕೊರೊನಾ ವಕ್ಕರಿಸಿದ್ದು, ಈತ ಇಟಲಿಯಿಂದ, ದೋಹಾಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದರು. ಅವರನ್ನು 7 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಮುಗಿಸಿ ಮನೆಗೆ ಬಂದು ಮೂರು ದಿನ ಆದ ಮೇಲೆ ಪಾಸಿಟಿವ್ ವರದಿ ಬಂದಿದೆ.
ಈಗಾಗಲೇ ರೋಗಿಯನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದ್ದು, ರೋಗಿ ವಾಸವಿದ್ದ ಜಾಗವನ್ನು ಸೀಲ್ ಡೌನ್ ಮಾಡಿ 28 ದಿನ ಯಾರೂ ಹೊರಬಾರದಂತೆ ಸೂಚನೆ ನೀಡಲಾಗಿದೆ.
ಇನ್ನು 15 ದಿನಗಳ ಹಿಂದೆ ಕೊರೊನಾ ಸೋಂಕಿತನ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೋಗಿ ಮನೆಗೆ ಬಂದು ತಂದೆಯ ತಿಥಿ ಕಾರ್ಯ ಕೂಡ ಮಾಡಿದ್ದರು.








