Shravana masa – ಶ್ರಾವಣ ಮಾಸದಲ್ಲಿ ಶಿವನ ಪೂಜೆಗೇಕಿಷ್ಟು ಮಹತ್ವ.. ?
ನಿನ್ನೆಯಿಂದ ಶ್ರಾವಣ ಮಾಸ ಆರಂಭವಾಗಿದೆ. ಹಿಂದೂ ಚಂದ್ರಮಾನ ಪಂಚಾಗದ ಪ್ರಕಾರ ಶ್ರಾವಣ ಐದನೇ ಮಾಸ. ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಪೂಜೆ ಪುನಸ್ಕಾರಗಳು ಹಬ್ಬ ವ್ರತಗಳು ಶುರುವಾಗುತ್ತವೆ. ಶ್ರಾವಣ ಮಾಸ ಶಿವನ ಅಚ್ಚು ಮೆಚ್ಚಿನ ಮಾಸ, ಶ್ರಾವಣ ಮಾಸದಲ್ಲಿ ಶಿವನನ್ನ ಪೂಜಿಸಿದರೆ ಶಿವ ಬೇಗ ಪ್ರಸನ್ನನಾಗುತ್ತಾನೆ ಎಂಬುದು ನಂಬಿಕೆ.
ಆಷಾಡ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನವ ನಕ್ಷತ್ರ ಆಕಾಶವನ್ನು ಆಳುತ್ತದೆ. ಆದ್ದರಿಂದ ಈ ಮಾಸಕ್ಕೆ ಶ್ರಾವಣ ಮಾಸ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಸಂಸ್ಕೃತದಲ್ಲಿ ಶ್ರಾವಣ ಎಂದರೆ ಆಲಿಸುವುದು ಎಂದರ್ಥ. ಹೀಗಾಗಿ ಈ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸಬೇಕು. ಶಿವನ ಕುರಿತಾದ ಸ್ತೋತ್ರ ಪಠನೆ, ಧ್ಯಾನ ಮಾಡಬೇಕು.
ಶ್ರಾವಣ ಮಾಸದಲ್ಲಿ ಶಿವನಿಗೆ ಏಕೆ ಇಷ್ಟು ಮಹತ್ವ ಎನ್ನುವುದಕ್ಕೂ ಒಂದು ಕಥೆಯಿದೆ.
ಸಮುದ್ರ ಮಂಥನದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುವಾಗ ಅಮೃತಕ್ಕೂ ಮೊದಲು ಬಂದಿದ್ದು ಹಾಲಾಹಲ. ಜಗತ್ತನ್ನೇ ನಾಶ ಮಾಡುವ ಶಕ್ತಿ ಇದ್ದ ಹಾಲಾಹಲವನ್ನು ಲೋಕದ ಕಲ್ಯಾಣಕ್ಕಾಗಿ ಭಗವಾನ್ ಶಂಕರ ವಿಷ ಕುಡಿದು ಲೋಕವನ್ನ ರಕ್ಷಿಸುತ್ತಾನೆ. ವಿಷ ಗಂಟಲಿಂದ ಕೆಳಗೆ ಇಳಿಯುವ ಮುನ್ನವೆ ಪಾರ್ವತಿ ದೇವಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಹೀಗಾಗಿ ಶಿವ ನೀಲಕಂಠನಾಗುತ್ತಾನೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಇದೇ ಶ್ರಾವಣ ಮಾಸದಲ್ಲಿ. ಹೀಗಾಗಿ ಈ ಮಾಸಕ್ಕೆ ಹೆಚ್ಚಿನ ಶಕ್ತಿ ಇದೆ.
ಶ್ರಾವಣದಲ್ಲಿ ಶಿವಣ ಪೂಜೆ ಮಾಡುವುದು ಹೇಗೆ ?
ಶ್ರಾವಣ ಮಾಸದ ಪ್ರತಿ ಸೋಮವಾರದಂದು ಶಿವನನ್ನ ಪೂಜಿಸಿ ಅರ್ಚಿಸಬೇಕು. ಶಿವ ಲಿಂಗಕ್ಕೆ ನಿತ್ಯ ಜಲ ಅರ್ಪಿಸಿ, ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಬೇಕು ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿ ನಿತ್ಯ ಶಿವ ಪಂಚಾಕ್ಷರಿ ಮಂತ್ರವನ್ನ ಜಪಿಸಬೇಕು.
ಇನ್ನು ಶ್ರಾವಣದಲ್ಲಿ ರುದ್ರಾಕ್ಷಿಯ ಹಾರ, ಓಲೆ ಧರಿಸುವುದು ಅತ್ಯಂತ ಶುಭ ಎನ್ನಲಾಗಿದೆ. ಶ್ರಾವಣ ಸಮೃದ್ಧಿಯ ಸಂಕೇತ ನೀವು ಕೂಡ ಶಿವನನ್ನ ಅರ್ಚಿಸಿ ಅವನ ಕೃಪೆಗೆ ಪಾತ್ರರಾಗಿ..








