Prahlad Joshi | ಸಿಎಂ ಬದಲಾವಣೆ ಬಗ್ಗೆ ಪ್ರಹ್ಲಾದ್ ಜೋಶಿ ಹೇಳಿದ್ದೇನು ?
ಹುಬ್ಬಳ್ಳಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ಆ ತರಹದ ಯಾವುದೇ ಪ್ರಶ್ನೆಯೇ ಇಲ್ಲ. ಅಧಿಕಾರ ವಲಯದಲ್ಲಿ ಅಸ್ತಿರತೆ ಮೂಡಿಸಲು ಕಾಂಗ್ರೆಸ್ ಹುನ್ನಾರ ನಡೆಸಿದೆ. ಅದನ್ನ ನಾವು ಬಿಡೋದಿಲ್ಲ ಎಂದು ಸ್ಪಷ್ಟಪಸಿದರು.
ಇದೇ ವೇಳೆ ಸಿಎಂ ರೇಸ್ ನಲ್ಲಿ ಜಗದೀಶ್ ಶೆಟ್ಟರ್ ಹೆಸರು ಬಂದಿರುವ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಸಿಎಂ ವಿಚಾರದಲ್ಲಿ ಜಗದೀಶ ಶೆಟ್ಟರ್ ಹೆಸರು ಯಾರು ಮುನ್ನೆಲೆಗೆ ತಂದಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ರಾಷ್ರ್ಟ್ರೀಯ ನಾಯಕತ್ವದಲ್ಲಿಯೂ ಯಾವುದೇ ಚರ್ಚೆ ಇಲ್ಲ. ಶೆಟ್ಟರ್ ಹಿರಿಯ ಹಾಗೂ ಪ್ರಭಾವಿ ನಾಯಕರು. ಅವರ ಎಲ್ಲ ವಿಚಾರದಲ್ಲೂ ಬಂದೇ ಬರುತ್ತದೆ, ಅದರಲ್ಲೇನು ವಿಷೇಶವಿಲ್ಲ ಎಂದು ಹೇಳಿದರು.
ಇದೇ ವೇಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗಾಗಿ ಹಿಂದೂ ಸಂಘಟನೆಗಳ ಮನವಿ ವಿಚಾರವಾಗಿ ಮಾತನಾಡಿ, ಈದ್ಗಾ ಮೈದಾನ ಪಾಲಿಕೆ ವ್ಯಾಪ್ತಿಯಲ್ಲಿದೆ. ಈ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಸ್ವತಂತ್ರ ಅಧಿಕಾರವಿದೆ. ಇದರ ಬಗ್ಗೆ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟ ವಿಚಾರ. ಧಾರ್ಮಿಕ ಆಚರಣೆ ವಿಚಾರವಾಗಿ ಸುಪ್ರೀಂಕೋರ್ಟ್ ನಿಂದಲೇ ಆದೇಶವಿದೆ. ವರ್ಷಕ್ಕೆ ಎರಡೂ ಬಾರಿ ಮುಸ್ಲಿಂ ಸಮೂದಾಯದ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.