ಮುಂಬೈ, ಜೂನ್ 3 : ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ಅವರು 47 ವರ್ಷಗಳ ಆನಂದದಾಯಕ ದಾಂಪತ್ಯವನ್ನು ಪೂರ್ಣಗೊಳಿಸುತ್ತಿದ್ದಾರೆ. ಪ್ರೀತಿ ಮತ್ತು ಸಂಬಂಧಗಳ ಪರಿಪೂರ್ಣ ಉದಾಹರಣೆಯಾಗಿ ಹೊರಹೊಮ್ಮಿದ ಅಮಿತಾಬ್ ಮತ್ತು ಜಯ ಅವರ ಪ್ರೇಮಕಥೆ ಇಲ್ಲಿದೆ. ಜಯ ಬಚ್ಚನ್ (ಆಗಿನ ಭಾದುರಿ) 1970 ರಲ್ಲಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಮೊದಲ ಬಾರಿಗೆ ಬಿಗ್ ಬಿ ಯನ್ನು ನೋಡಿದರು. ಆ ಸಮಯದಲ್ಲಿ ಅಮಿತಾಬ್ ಸ್ಟಾರ್ ಆಗಿದ್ದರೂ, ಇನ್ನೂ ಉದ್ಯಮದಲ್ಲಿ ಸ್ಥಾನ ಗಿಟ್ಟಿಸಲು ಹೆಣಗಾಡುತ್ತಿದ್ದರು. ಆಗ ಅವರಿಬ್ಬರ ನಡುವೆ ಇನ್ನೂ ಪ್ರೀತಿ ಅರಳಿರಲಿಲ್ಲ. ಆದರೆ ಜಯಾ ಮೇಲೆ ಬಚ್ಚನ್ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದರು. ಅಮಿತಾಬ್ ಅವರ ಸರಳತೆ ಜಯಾ ಅವರನ್ನು ಸೆಳೆದಿತ್ತು.
ನಿರ್ಮಾಪಕ ಹೃಷಿಕೇಶ್ ಮುಖರ್ಜಿ ಅವರು 1971 ರಲ್ಲಿ ಬಿಡುಗಡೆಯಾದ ಗುಡ್ಡಿ ಚಿತ್ರದ ಚಿತ್ರೀಕರಣದಲ್ಲಿ ಅಮಿತಾಬ್ ಮತ್ತು ಜಯ ಅವರನ್ನು ಅಧಿಕೃತವಾಗಿ ಪರಿಚಯಿಸಿದರು. ಗುಡ್ಡಿ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಳ್ಳುವ ಜಯ, ನನಗೆ ಗುಡ್ಡಿಯ ಸೆಟ್ ನಲ್ಲಿ ಅಮಿತಾಭ್ ಬಚ್ಚನ್ ಅವರ ಪರಿಚಯವಾಯಿತು. ಹರಿವಂಶ ಬಚ್ಚನ್ ಅವರ ಮಗನಾಗಿದ್ದರಿಂದ ನಾನು ಅವರಿಂದ ಪ್ರಭಾವಿತನಾಗಿದ್ದೆ ಮತ್ತು ಸ್ವಲ್ಪ ವಿಸ್ಮಯಗೊಂಡಿದೆ. ಅವರು ಸ್ವಲ್ಪ ವಿಭಿನ್ನ ಎಂದು ಭಾವಿಸಿದ್ದೆ ಎಂದು ಹೇಳುತ್ತಾರೆ.
ಅಂದು ಅಮಿತಾಬ್ ಬಚ್ಚನ್ ನಟಿಸಿದ್ದ ಚಿತ್ರಗಳೆಲ್ಲಾ ತೋಪಾಗಿದ್ದ ಕಾರಣಕ್ಕೆ ಅವರೊಡನೆ ‘ಜಂಝೀರ್’ ಚಲನಚಿತ್ರದಲ್ಲಿ ನಾಯಕಿಯಾಗಿ ನಟಿಸಲು ನಾಯಕನಟಿಯರು ನಿರಾಕರಿಸಿದ ಕಾರಣಕ್ಕೆ ಜಯಾ ಆ ಚಲನಚಿತ್ರದ ನಾಯಕಿನಟಿಯಾಗಿ ಪ್ರವೇಶಿಸಿದರು. ಆಲ್ಲಿಂದ ಅಮಿತಾಬ್ ರವರ ಯಶಸ್ವಿನ ದಾರಿ ಪ್ರಾರಂಭವಾಯಿತು. ಸಿನೆಮಾರಂಗದಲ್ಲಿ ಆಂಗ್ರಿ ಯಂಗ್ ಮ್ಯಾನ್ ಎಂದು ಗುರುತಿಸಲ್ಪಟ್ಟ ಅಮಿತಾಬ್ ಬಚ್ಚನ್ ಆ ಸಮಯದಲ್ಲಿ ಜಯಾ ಭಾದುರಿಗೆ ಹೃದಯವನ್ನು ಕಳೆದುಕೊಂಡು ಬಿಟ್ಟರು. ಜಯಾ ಅವರ ಆತ್ಮೀಯ ಸ್ನೇಹಿತರಾಗಿದ್ದ ರಾಜೇಶ್ ಖನ್ನಾ, ಅಮಿತಾಬ್ ಅವರೊಂದಿಗಿನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ರಾಜೇಶ್ ಮತ್ತು ಜಯ ಅಭಿನಯನದ ಬಾವಾರ್ಚಿಯ ಸೆಟ್‌ಗಳಲ್ಲಿ ಆಗಾಗ್ಗೆ ಭೇಟಿ ನೀಡುತ್ತಿದ್ದ ಬಚ್ಚನ್ ಅವರನ್ನು ಭೇಟಿಯಾಗುವ ಬಗ್ಗೆ ಅವರು ಜಯಾಗೆ ಎಚ್ಚರಿಕೆ ನೀಡಿದರು.
ಅಮಿತಾಬ್ ಮತ್ತು ಜಯಾ ಅಭಿನಯಿಸಿದ್ದ 1973 ರಲ್ಲಿ ಬಿಡುಗಡೆಯಾದ ‘ಜಂಜೀರ್’ ಚಲನಚಿತ್ರವು ಭಾರಿ ಯಶಸ್ಸನ್ನು ಕಂಡಾಗ, ತಂಡವು ಲಂಡನ್ ಪ್ರವಾಸದೊಂದಿಗೆ ಯಶಸ್ಸನ್ನು ಆಚರಿಸಲು ನಿರ್ಧರಿಸಿತು. ಅಮಿತಾಬ್ ಅವರ ತಂದೆ ಹರಿವಂಶರಾಯ್ ಜಯಾ ಕೂಡ ಬರುವುದಾದರೆ ಮದುವೆ ಮಾಡಿಕೊಂಡೇ ಹೋಗಬೇಕು ಎಂದು ಕಂಡೀಶನ್ ಹಾಕಿದರು , ಜಯಾಳೊಂದಿಗೆ ಪ್ರವಾಸ ಹೋಗಲು ಬಿಡುವುದಿಲ್ಲ ಎಂದು ತಿಳಿಸಿದರು. ಆದರೂ ಬಿಗ್ ಬಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ ಮತ್ತು ಜಯಾಳ ಹೆತ್ತವರೊಡನೆ ಮದುವೆ ಪ್ರಸ್ತಾಪವನ್ನು ತೆಗೆದರು.
1973 ರ ಜೂನ್ 3 ರಂದು ಮದುವೆ ಯಾದ ಅಮಿತಾಭ್ ಮತ್ತು ಜಯಾ, ನಂತರ ಅದೇ ದಿನ ಒಟ್ಟಿಗೆ ಲಂಡನ್‌ಗೆ ಪ್ರಯಾಣಿಸಿದರು. ಮಾರ್ಚ್ 1974 ರಲ್ಲಿ ಮಗಳು ಶ್ವೇತಾ ಬಚ್ಚನ್ ಜನಿಸಿದರೆ, ಮೂರು ವರ್ಷಗಳ ಬಳಿಕ ಅಭಿಷೇಕ್ ಬಚ್ಚನ್ ಜನಿಸಿ ಅವರ ಬದುಕನ್ನು ಸಂಪೂರ್ಣಗೊಳಿಸಿದರು. ಇದೀಗ ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ, ಮತ್ತು ಶ್ವೇತಾ ಬಚ್ಚನ್ ನಂದಾ ಮತ್ತು ನಿಖಿಲ್ ನಂದಾ ಅವರ ಮಕ್ಕಳಿಗೆ ಅಜ್ಜ ಅಜ್ಜಿಯಾಗಿ ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.








