Hiraben Modi: ಮಕ್ಕಳೊಂದಿಗೆ ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗವಹಿಸಿ ಮೋದಿ ತಾಯಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಶನಿವಾರ ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಗಾಂಧಿನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಮಕ್ಕಳಿಗೆ ತ್ರಿವರ್ಣ ಧ್ವಜಗಳನ್ನು ವಿತರಿಸಿ, ಅವರೊಂದಿಗೆ ಧ್ವಜಾರೋಹಣ ಮಾಡಿದರು.
ಕಳೆದ ಜೂನ್ ನಲ್ಲಿ ಹೀರಾಬೆನ್ 100ನೇ ವರ್ಷಕ್ಕೆ ಕಾಲಿಟ್ಟಿದ್ದರು. ಹೀರಾಬೆನ್ ಅವರು ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಅವರ ಮನೆಯಲ್ಲಿ ತಂಗಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಶನಿವಾರ ಅಹಮದಾಬಾದ್‌ನ ಮಕ್ಕಳ ವಿಶ್ವವಿದ್ಯಾಲಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಮೂರು ದಿನಗಳ “ಹರ್ ಘರ್ ತಿರಂಗ” ಅಭಿಯಾನಕ್ಕೆ ಚಾಲನೆ ನೀಡಿದರು. ರಾಜ್ಯದ ವಿವಿಧೆಡೆ ಬಿಜೆಪಿ ಶಾಸಕರು, ಸಚಿವರು ತಿರಂಗ ಧ್ವಜ ರ್ಯಾಲಿಯಲ್ಲಿ ಪಾಲ್ಗೊಂಡು ಜನರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.
ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅವರು ಮೆಹ್ಸಾನಾ ಜಿಲ್ಲೆಯ ಬಿಜಾಪುರದಲ್ಲಿ ಏಳು ಕಿಲೋಮೀಟರ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ವಡೋದರಾದಲ್ಲಿ ಬಿಜೆಪಿ ಸಂಸದ ರಂಜನ್ ಸ್ಥಳೀಯ ಶಾಸಕರೊಂದಿಗೆ “ತಿರಂಗಾ ಯಾತ್ರೆ”ಯಲ್ಲಿ ಭಾಗವಹಿಸಿದ್ದರು. ಇದೇ ರೀತಿಯ ಯಾತ್ರೆಗಳು ರಾಜ್ಯದ ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ ನಡೆದವು.