ಬಸ್ ಮತ್ತು ಆಯಿಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ – 20 ಮಂದಿ ಸಾವು
ಪ್ರಯಾಣಿಕರಿದ್ದ ಬಸ್ ಮತ್ತು ಆಯಿಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು 20 ಮಂದಿ ಸಾವನಪ್ಪಿರುವ ಘಟನೆ ಪಾಕಿಸ್ತಾನದ ಮುಲ್ತಾನ್ ನಲ್ಲಿ ನಡೆದಿದೆ. ಗಾಯಗೊಂಡಿರುವವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾದ್ಯತೆ ಇದೆ.
ಮುಲ್ತಾನ್ ಪಂಜಾಬ್ ಪ್ರಾಂತ್ಯದಲ್ಲಿದ್ದು,ಲಾಹೋರ್ನಿಂದ 350 ಕಿಮೀ ದೂರದಲ್ಲಿದೆ. ಘಟನೆಯ ವೇಳೆ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಬಸ್ ವೇಗವಾಗಿ ಬರುತ್ತಿದ್ದದ್ದೆ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ನಂತರ ಬಸ್ ಮತ್ತು ಟ್ಯಾಂಕರ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಮೃತ ದೇಹಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಡಿಎನ್ಎ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದ ಎಂದು ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ತಂಡ ತಿಳಿಸಿದೆ. ಗಾಯಾಳುಗಳನ್ನು ಮುಲ್ತಾನ್ನ ನಿಶ್ತಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಹಾಗೂ ಮೃತ ದೇಹಗಳನ್ನು ಆಡಳಿತ ಮಂಡಳಿಯಿಂದ ಗುರುತಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ ಸಹಾಯ ಮಾಡುವಂತೆ ಕೋರಿದ್ದಾರೆ.








