ರಾಷ್ಟ್ರ ಮಟ್ಟದ ಹುದ್ದೆಗೆ BSY – BJP ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಸ್ಥಾನ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಪ್ರಮುಖ ಸ್ಥಾನ ನೀಡಿ ಹೈಕಮಾಂಡ್ ಆದೇಶ ಹೊರಡಿಸಿದೆ. ಬಿಜೆಪಿ ನೂತನ ಸಂಸದೀಯ ಮಂಡಳಿಯನ್ನು ರಚಿಸಿದ್ದು ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಷ್ಟ್ರಮಟ್ಟದ ಸಂಸದೀಯ ಮಂಡಳಿಯಲ್ಲಿ (BJP Parliamentary Board) ಸ್ಥಾನ ನೀಡಿದೆ.
ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಅವರು ನಿರ್ಗಮಿಸಿದ ನಂತರ ಪಕ್ಷದ ಪ್ರಮುಖ ಚಟುವಟಿಕೆಯಿಂದ ಅವರು ದೂರವಿದ್ದರು. ಪಕ್ಷದಲ್ಲಿ ಅವರ ಮುಂದಿನ ಸ್ಥಾನಮಾನದ ಬಗ್ಗೆಯೂ ಚರ್ಚೆಗಳಾಗುತ್ತಿತ್ತು. ಈಗ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ.
ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಇಬ್ಬರು ಕನ್ನಡಿಗರಿಗೆ ಅವಕಾಶ ಸಿಕ್ಕಿದೆ. ಯಡಿಯೂರಪ್ಪನವರಿಗೆ ಸದಸ್ಯ ಸ್ಥಾನ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಸಮಿತಿಯಲ್ಲಿ 15 ಮಂದಿ ಸದಸ್ಯರಿದ್ದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಇತರರಿದ್ದಾರೆ.
ಹಿರಿಯ ನಾಯಕರಾದ ನಿತಿನ್ ಗಡ್ಕರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿಯ ಪ್ರಮುಖ ಸಂಸದೀಯ ಸಮಿತಿಯಿಂದ ಕೈಬಿಡಲಾಗಿದೆ. ಬಿಜೆಪಿಯ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಸಂಸದೀಯ ಮಂಡಳಿ ಹೊಂದಿರಲಿದೆ.