Gaalipata 2 : ಅಭಿಮಾನಿಗಳಿಗೆ ಭಾವನಾತ್ಮವಾಗಿ ಧನ್ಯವಾದಗಳನ್ನ ಅರ್ಪಿಸಿದ ಗೋಲ್ಡನ್ ಸ್ಟಾರ್..
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಮೋಡಿ ಮಾಡಿದೆ. ಇವರಿಬ್ಬರ ಕಾಂಬಿನೇಷನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದು , ಗಾಳಿಪಟ 2 ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿದೆ..
ಸಿನಿಮಾ ಸಕ್ಸಸ್ ಕಂಡ ಹಿನ್ನೆಲೆ ಗೋಲ್ಡನ್ ಸ್ಟಾರ್ ಗಣೇಶ್ ಪತ್ರದ ಮೂಲಕ ಅಭಿಮಾನಿಗಳಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.
“ನಮ್ಮ ‘ಗಾಳಿಪಟ 2’ ಚಿತ್ರವನ್ನು ನೀವೆಲ್ಲರೂ ಪ್ರೀತಿಯಿಂದ ಸ್ವೀಕರಿಸಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ. ಅಭಿಮಾನಿಗಳು ಸಂಭ್ರಮಿಸುವ ಪ್ರತಿ ಕ್ಷಣವೂ ಕಲಾವಿದನನ್ನು ಆಶೀರ್ವದಿಸಿದಂತೆ. ಆ ನಿಟ್ಟಿನಲ್ಲಿ ನಾನು ನಿಜಕ್ಕೂ ಅದೃಷ್ಟವಂತ. ನನ್ನ ಮೊದಲನೇ ಸಿನಿಮಾದಿಂದ ಶುರುವಾಗಿ ಈಗಿನವರೆಗೂ ನನ್ನನ್ನು ಆಶೀರ್ವದಿಸುತ್ತಾ ತೋರುತ್ತಿರುವ ಪ್ರೀತಿಗೆ ನಾನು ಋಣಿ”
” ವಿಭಿನ್ನ ಬಗೆಯ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರಾದ ನಿಮ್ಮನ್ನು ರಂಜಿಸಿ ಖುಷಿಪಡಿಸುವ ಕಾರ್ಯವನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ. ಅವುಗಳಲ್ಲಿ ಅನೇಕ ಪಾತ್ರಗಳು ನಿಮಗೆ ಆಪ್ತವೆನಿಸಿದರೆ ಒಂದಷ್ಟು ನಿಮ್ಮನ್ನು ನಿರಾಸೆಗೊಳಿಸಿರಬಹುದು. ಹಾಗಾಗಿ ಸಿನಿಮಾ ಬಗ್ಗೆ ನೀವು ನೀಡಿರುವ ತೀರ್ಪುಗಳನ್ನು ಸಮಭಾವ, ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗದೆ, ಪ್ರತೀ ಚಿತ್ರದಲ್ಲೂ ನನ್ನಲ್ಲಿ ನಾನೇ ಒಬ್ಬ ಉತ್ತಮ ಕಲಾವಿದನಿಗಾಗಿ ಹುಡುಕಾಟ ನಡೆಸಿದ್ದೇನೆ”
“ನಿಮ್ಮ ನಂಬಿಕೆಯ ಗಣೇಶ ನಿಮ್ಮ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೆ ಹುಸಿ ಮಾಡದಂತೆ ಎಚ್ಚರ ವಹಿಸಿದ್ದೇನೆ. ಇದೆಲ್ಲವೂ ನೀವುಗಳು ನನ್ನ ಹಾಗೂ ನನ್ನ ಅಭಿನಯದ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾನು ಸಲ್ಲಿಸಬಹುದಾದ ಪುಟ್ಟ ಗೌರವ ಎಂಬುದಷ್ಟೆ ನನ್ನ ಭಾವನೆ” ಎಂದಿದ್ದಾರೆ.
ಅಲ್ಲದೇ ನಿರ್ಮಾಕರು , ನಿರ್ದೇಶಕರು ಹಾಗೂ ಇಡೀ ಟೀಮ್ ಗೆ ಧನ್ಯವಾದಗಳನ್ನ ಅರ್ಪಿಸಿರುವ ಗಣೇಶ್ “ ‘ಗಾಳಿಪಟ 2’ ಸಿನಿಮಾದ ಮೂಲಕ ಮನೆ-ಮನೆಗೆ ಖುಷಿಯನ್ನು ಹಂಚಿದ ನಿರ್ದೇಶಕರಾದ ನಲ್ಮೆಯ ಶ್ರೀ ಯೋಗರಾಜ್ ಭಟ್ ಅವರಿಗೆ, ಹೆಮ್ಮೆಯ ನಿರ್ಮಾಪಕರಾದ ರಮೇಶ್ ರೆಡ್ಡಿ ಅವರಿಗೆ, ವಿತರಿಸಿದ ಕೆವಿಎನ್ ಸಂಸ್ಥೆಗೆ ಹಾಗೂ ನಮ್ಮ ಗಾಳಿಪಟ 2 ಸಿನಿಮಾದ ಇಡೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಮನದಾಳದ ಧನ್ಯವಾದಗಳು ಹಾಗೂ ಹೃತ್ಪೂರ್ವಕ ಅಭಿನಂದನೆಗಳು. ಮನರಂಜಿಸುವ ಕಾಯಕ ನಿರಂತರವಾಗಿ ಸಾಗಲು ನಿಮ್ಮ ಪ್ರೀತಿ ಜೊತೆಗೆ ಅಕ್ಕರೆ ತುಂಬಿದ ಅಭಿಮಾನ ಸದಾ ಜೊತೆಗಿದ್ದರೆ ಸಾಕು ಎಂದಿದ್ದಾರೆ.








