ಆಯ್ಕೆ ಸಮಿತಿಯಲ್ಲಿ ಇರ್ಫಾನ್ ಪಠಾಣ್ ಆಸ್ಟ್ರೇಲಿಯಾ ಸರಣಿಗೆ ಬೇಡ ಎಂದಿದ್ದ ದಾದಾ…!
ಆಯ್ಕೆ ಸಮಿತಿ ಸಭೆಯಲ್ಲಿ 2003ರ ಆಸ್ಟ್ರೇಲಿಯಾ ಸರಣಿಗೆ ಇರ್ಫಾನ್ ಪಠಾಣ್ ಬೇಡ ಎಂದು ಆಗಿನ ನಾಯಕ ಸೌರವ್ ಗಂಗೂಲಿ ಹೇಳಿದ್ದರಂತೆ. ಅರೇ,, ದಾದಾ ಹೀಗೂ ಮಾಡ್ತಾರಾ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಗಂಗೂಲಿ ಯಾಕೆ ಬೇಡ ಅಂದಿದ್ದಾರೆ ಅಂದ್ರೆ ಇರ್ಫಾನ್ ಪಠಾಣ್ ಅವರ ಭವಿಷ್ಯದ ಹಿತದೃಷ್ಟಿಯಿಂದ. ಈ ಮಾತನ್ನು ಬೇರೆ ಯಾರು ಹೇಳಿದ್ದು ಅಲ್ಲ. ಸ್ವತಃ ಇರ್ಫಾನ್ ಪಠಾಣ್ ಅವರೇ ಹೇಳಿಕೊಂಡಿರುವುದು.
ಸಾಮಾನ್ಯವಾಗಿ ದಾದಾನ ಬಗ್ಗೆ ಯಾವುದೇ ಆರೋಪಗಳಿಲ್ಲ. ಅದ್ರಲ್ಲೂ ಯುವ ಆಟಗಾರರಿಗೆ ಸ್ಪೂರ್ತಿ ನೀಡಿದವರಲ್ಲಿ ಮುಂಚೂಣಿಯಲ್ಲಿ ನಿಂತಿರುವವರು ಅಂದ್ರೆ ಅದು ಸೌರವ್ ಗಂಗೂಲಿ. ಗಂಗೂಲಿ ನಾಯಕತ್ವದಲ್ಲಿ ಅನೇಕ ಪ್ರತಿಭಾನ್ವಿತ ಯುವ ಆಟಗಾರರನ್ನು ಬೆಳಕಿಗೆ ತಂದಿದ್ದಾರೆ. ಆಯ್ಕೆಗಾರರ ಜೊತೆ ಧೈರ್ಯವಾಗಿ ಮಾತನಾಡಿಕೊಂಡು ತನಗೆ ಬೇಕಾದಂತಹ ತಂಡವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಗಂಗೂಲಿ ಯಶ ಕೂಡ ಸಾಧಿಸಿದ್ದಾರೆ.
ನನಗೆ ಆಗ ಇನ್ನೂ 19ರ ಹರೆಯ. ಆಸ್ಟ್ರೇಲಿಯಾ ಸರಣಿ
ತುಂಬಾ ಕಠಿಣವಾಗಿರುವಂತಹ ಸರಣಿ. ಆಸ್ಟ್ರೇಲಿಯಾ ಸರಣಿಯಾದ ನಂತರ ದಾದಾ ನನ್ನ ಬಳಿ ಒಂದು ವಿಷ್ಯವನ್ನು ಹೇಳಿದ್ದರು. ಆಗ ನಾನು ಅವರ ಜೊತೆ ಮುಕ್ತವಾಗಿ ಬೆರೆಯುತ್ತಿದ್ದೆ. ಇರ್ಫಾನ್ ನಿನಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ನೀನು ಆಸ್ಟ್ರೇಲಿಯಾ ಸರಣಿಗೆ ಬರುವುದು ಇಷ್ಟವಿರಲಿಲ್ಲ. ಆಯ್ಕೆ ಸಮಿತಿಯಲ್ಲಿ ನಿನ್ನ ಹೆಸರನ್ನು ನಾನು ರಿಜೆಕ್ಟ್ ಮಾಡಿದ್ದೆ. ಹಾಗಂತ ನಿನ್ನ ಬೌಲಿಂಗ್ ನೋಡಿ ಅಲ್ಲ. ಬದಲಾಗಿ 19ರ ಹರೆಯದ ನಿನ್ನನ್ನು ಆಸ್ಟ್ರೇಲಿಯಾದಂತಹ ಕಠಿಣ ಸರಣಿಗೆ ಕರೆದುಕೊಂಡು ಹೋಗುವುದು ನನಗಿಷ್ಟವಾಗಿರಲಿಲ್ಲ. ಆದ್ರೆ ಈಗ ನಿನ್ನನ್ನು ನೋಡಿದ ಮೇಲೆ ತಿಳಿಯಿತ್ತು. ನೀನು ಚೆನ್ನಾಗಿ ಪ್ರದರ್ಶನ ನೀಡುತ್ತಿಯಾ ಅನ್ನೋ ನಂಬಿಕೆ ನನಗಿದೆ ಎಂದು ದಾದಾ ಹೇಳಿರುವುದನ್ನು ಇರ್ಫಾನ್ ಪಠಾನ್ ಹೇಳಿಕೊಂಡಿದ್ದಾರೆ.
ನಂತರ ನನ್ನ ಕ್ರಿಕೆಟ್ ಬದುಕಿನಲ್ಲಿ ದಾದಾ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದರು. ದಾದಾ ಒಬ್ಬ ಆಟಗಾರನ ಮೇಲೆ ನಂಬಿಕೆ ಬಂದ್ರೆ ಸಾಕು ಅವರು ಎಂಥಾ ಸನ್ನಿವೇಶದಲ್ಲೂ ಕೈಬಿಡುವುದಿಲ್ಲ. ಇದು ದಾದಾನ ವಿಶೇಷತೆ . ಹಾಗೇ ಆಟಗಾರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದರು ಎಂದು ಇರ್ಫಾನ್ ಪಠಾಣ್ ಹೇಳಿದ್ರು.
ಇನ್ನು ಇರ್ಫಾನ್ ಪಠಾನ್ ಕಪಿಲ್ ದೇವ್ ಮತ್ತು ವಾಸೀಮ್ ಅಕ್ರಂ ಬಗ್ಗೆ ಅಪಾರವಾದ ಗೌರವವನ್ನಿಟ್ಟುಕೊಂಡಿದ್ದಾರೆ. ನನ್ನ ಕ್ರಿಕೆಟ್ ಬದುಕಿನ ಪ್ರೇರಣಾ ಶಕ್ತಿಗಳು ಅವರು. ನಾನು ವಾಸೀಮ್ ಅಕ್ರಮ್ ಜೊತೆ ಮೊದಲ ಬಾರಿ ಭೇಟಿಯಾದ ಅವರು ಸಕಾರತ್ಮಕವಾದ ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದರು. ಹಾಗೇ ಕಪಿಲ್ ದೇವ್ ಅವರ ನಾಯಕತ್ವದ ಗುಣ, ಆಲ್‍ರೌಂಡರ್, ಬೌಲಿಂಗ್ ಹೀಗೆ ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಾನು ಬೆಳೆದಿದ್ದೇನೆ ಎಂದು ಪಠಾಣ್ ಹೇಳಿದ್ರು.








