ಎಂಜಿ ಶ್ರೀನಿವಾಸ್ (ಶ್ರೀನಿ) ನಿರ್ದೇಶನದ ‘ಬೀರ್ ಬಲ್ ಟ್ರೈಲಜಿ’ಯ ಮೊದಲ ಭಾಗ ಚಿತ್ರಮಂದಿರಗಳಲ್ಲಿ ಗೆಲ್ಲದಿದ್ದರೂ, ಒಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ‘ಬೀರ್ಬಲ್’ ಕನ್ನಡ ಮಾತ್ರವಲ್ಲದೆ ಪರಭಾಷೆಯ ಸಿನಿಮಾ ಪ್ರೇಮಿಗಳಿಗೂ ಇಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಸಿನಿಮಾಗಳಲ್ಲಿ ‘ಬೀರ್ ಬಲ್’ ಎಂದು ಅನೇಕರು ಶ್ಲಾಘಿಸಿದ್ದಾರೆ. ಈ ಚಿತ್ರ ನಮ್ಮ ಭಾಷೆಗೂ ಬರಬೇಕು ಎಂದು ಇತರೆ ಭಾಷೆಯ ಸಿನಿಮಾ ಅಭಿಮಾನಿಗಳು ಹೇಳುತ್ತಿದ್ದಾರೆ. ಅದರಲ್ಲೂ ತಮಿಳಿಗರೂ ಸಿನಿಮಾ ಇಷ್ಟಪಟ್ಟು ಮೆಚ್ಚುಗೆ ಮಾತನಾಡುತ್ತಿದ್ದಾರೆ. ಇದರ ನಡುವೆ ‘ಬೀರ್ ಬಲ್’ ತಮಿಳಿಗೂ ರೀಮೇಕ್ ಆಗಲಿದೆ ಎಂಬ ಸುದ್ದಿ ಸಿನಿಮಾ ದುನಿಯಾದಲ್ಲಿ ಹರಿದಾಡುತ್ತಿದೆ.
ಹಾಗಾದರೆ ನಾಯಕ ಯಾರು?
ಕನ್ನಡದ ಬೀರ್ ಬಲ್ ನಲ್ಲಿ ನಿರ್ದೇಶಕ ಶ್ರೀನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರಕ್ಕೆ ನಟ ವಿಜಯ್ ಸೇತುಪತಿ ಹೆಸರು ಕೇಳಿಬಂದಿದೆ. ಇದರ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.ಬೀರ್ ಬಲ್ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಶ್ರೀನಿ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದರು.ಹೀಗಾಗಿ ತಮಿಳಿನಲ್ಲಿಯೂ ಶ್ರೀನಿ ಅವರೇ ನಿರ್ದೇಶನ ಮಾಡಲಿದ್ದಾರಂತೆ. ಇದು ಸತ್ಯವಾದರೆ ಶ್ರೀನಿ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ಯಾವ ರೀತಿ ಕೆಲಸ ಮಾಡಲಿದೆ ಎನ್ನುವುದು ಕುತೂಹಲ ಹೆಚ್ಚಿಸಲಿದೆ.
ಇನ್ನು ಬೀರ್ ಬಲ್ ಚಿತ್ರದ ಆರಂಭದಲ್ಲಿಯೇ ಇದು ಮೂರು ಭಾಗಗಳನ್ನು ಹೊಂದಿರುವ ಚಿತ್ರ ಎಂದು ಶ್ರೀನಿ ತಿಳಿಸಿದ್ದರು. ಅದರಂತೆ ಉಳಿದ ಎರಡು ಭಾಗಗಳ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿರುವುದಾಗಿಯೂ ಅವರು ಹೇಳಿದ್ದಾರೆ.






