ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಸಹೋದರಿ ಮೀರಾ ಚೋಪ್ರಾ ಅವರು ಟಾಲಿವುಡ್ ಯಂಗ್ ಟೈಗರ್ ಜೂ. ಎನ್ ಟಿಆರ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ. ಮೀರಾ ಚೋಪ್ರಾ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಲಾಕ್ ಡೌನ್ ನಿಂದ ಮನೆಯಲ್ಲೇ ಉಳಿದಿರುವ ಮೀರಾ ಅಭಿಮಾನಿಗಳೊಂದಿಗೆ ಮಾತನಾಡಲು ಟ್ವಿಟ್ಟರ್ ನಲ್ಲಿ ಆಸ್ಕ್ ಮೀರಾ ಎಂಬ ಸಂವಾದ ಕಾರ್ಯಕ್ರಮವನ್ನು ನಡೆಸಿದ್ದರು.
ಈ ವೇಳೆ ಅಭಿಮಾನಿಯೋರ್ವ ನಿಮಗೆ ತೆಲಗು ಸಿನಿಮಾರಂಗದಲ್ಲಿ ಪ್ರಿನ್ಸ್ ಮಹೇಶ್ ಬಾಬು ಇಷ್ಟವೋ ಇಲ್ಲ ಜೂ.ಎನ್ ಟಿಆರ್ ಇಷ್ಟವೋ ಎಂದು ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಗೆ ಉತ್ತರಿಸಿರುವ ಮೀರಾ, ನನಗೆ ಮಹೇಶ್ ಬಾಬು ಎಂದರೆ ಇಷ್ಟ ಎಂದು ಹೇಳಿದ್ದಾರೆ.
ಇದೇ ವೇಳೆ ಮೀರಾ ನನಗೆ ಜೂ.ಎನ್ ಟಿಆರ್ ಬಗ್ಗೆ ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದು ಉತ್ತರಿಸಿದ್ದಾರೆ. ಇದನ್ನು ಕಂಡು ಕೆಂಡಾಮಂಡಲವಾದ ಎನ್ ಟಿಆರ್ ಫ್ಯಾನ್ಸ್, ಟ್ವಿಟ್ಟರ್ ನಲ್ಲಿ ಮೀರಾ ವಿರುದ್ಧ ತಿರುಗಿ ಬಿದಿದ್ದಾರೆ. ಆಕೆಯನ್ನು ಟ್ಯಾಗ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಜೊತೆಗೆ ರೇಪ್, ಆಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆಯಾಗಿದ್ದಾರೆ.
ಇದರಿಂದ ಭಯಗೊಂಡ ಮೀರಾ ಈ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೀರಾ ಅವರನ್ನು ಟ್ಯಾಗ್ ಮಾಡಿ ಎನ್ ಟಿಆರ್ ಅಭಿಮಾನಿಗಳು ಮಾಡಿರುವ ಟ್ವೀಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ನೇರವಾಗಿ ಎನ್ ಟಿಆರ್ ಅವರನ್ನು ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಜೂ.ಎನ್ ಟಿಆರ್ ಈವರಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಜೊತೆಗೆ ಮೀರಾ ಅವರಿಗೂ ಕೆಲ ನಟಿಯರು ಬೆಂಬಲ ನೀಡುತ್ತಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪ್ರಕರಣಗಳು ಜಾಸ್ತಿಯಾಗಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.








