Noida: ಕೆಲವೇ ಕ್ಷಣಗಳಲ್ಲಿ ಅವಳಿ ಕಟ್ಟಡ ಧ್ವಂಸಕ್ಕೆ ಕ್ಷಣಗಣನೆ…
ಉತ್ತರ ಪ್ರದೇಶದ ನೋಯ್ಡಾದಲ್ಲಿನ ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್ ಕಂಪನಿಯ ಅವಳಿ ಕಟ್ಟಡಗಳನ್ನ ಧ್ವಂಸಗೊಳಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ಸುಮಾರು 100 ಮೀಟರ್ ಎತ್ತರಕ್ಕೆ ನಿರ್ಮಿಸಿರುವ ಕಟ್ಟಡವನ್ನ ಕೆಡವಲು 3700 ಕೆಜಿ ಸ್ಪೋಟಕವನ್ನ ಬಳಸಲಾಗುತ್ತಿದೆ.
ಈ ಅವಳಿ ಕಟ್ಟಡಗಳು ದೆಹಲಿಯ ಕುತುಬ್ ಮಿನಾರ್ ಗಿಂತ ಎತ್ತರದಲ್ಲಿವೆ. ವಾಟರ್ ಪಾಲ್ ಸ್ಫೋಟ ತಂತ್ರಜ್ಞಾನವನ್ನ ಬಳಸಿಕೊಂಡು 15 ಸೆಕೆಂಡ್ ಗಳಿಗಿಂತ ಕಡಿಮೆ ಅವಧಿಯಲ್ಲಿ ಕಟ್ಟಡವನ್ನ ನೆಲಸಮಗೊಳಿಸಲಾಗುತ್ತದೆ.
ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದು, ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಇತರ ಕಟ್ಟಡಗಳಿಗೆ ಯಾವುದೇ ಹಾನಿಯಾಗದಂತೆ ನೆಲಸಮ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 2.30ಕ್ಕೆ ನಿಗದಿತ ವೇಳಾಪಟ್ಟಿಯಂತೆ ಅವಳಿ ಗೋಪುರಗಳನ್ನು ಸುರಕ್ಷಿತವಾಗಿ ಕೆಡವಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.








