ಹೊಸದಿಲ್ಲಿ, ಜೂನ್ 04 : ಭಾರತೀಯ ಹವಾಮಾನ ಇಲಾಖೆ ಇದೀಗ ಮತ್ತೊಂದು ಚಂಡಮಾರುತದ ಮುನ್ಸೂಚನೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ‘ನಿಸರ್ಗ’ ಚಂಡಮಾರುತ ದುರ್ಬಲವಾಗಿದ್ದು, ಮತ್ತೊಮ್ಮೆ ವಾಯು ಭಾರ ಕುಸಿತದ ಮುನ್ಸೂಚನೆ ದೊರಕಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಗುರುವಾರ ಭಾರತೀಯ ಹವಾಮಾನ ಇಲಾಖೆ ಬಂಗಾಳಕೊಲ್ಲಿಯ ಪೂರ್ವ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಈ ಕುರಿತು ಸ್ಪಷ್ಟವಾದ ಚಿತ್ರಣ ಜೂನ್ 8ರ ಹೊತ್ತಿಗೆ ಹವಾಮಾನ ಇಲಾಖೆಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ವಾಯುಭಾರ ಕುಸಿತ ಉಂಟಾಗುವ ಸೂಚನೆಗಳು ಸಿಕ್ಕಿದ್ದು, ಈ ಚಂಡಮಾರುತದ ಪರಿಣಾಮವಾಗಿ ಜೂನ್ 10ರಿಂದ ಒಡಿಶಾ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಪಶ್ಚಿಮ ಬಂಗಾಳಕ್ಕೆ ಮೇ ತಿಂಗಳಿನಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಅಂಫಾನ್ ಚಂಡಮಾರುತ ಅಪ್ಪಳಿಸಿ ಅಪಾರ ಹಾನಿ ಉಂಟು ಮಾಡಿತ್ತು. ಜೂನ್ 3 ರಂದು ಮಹಾರಾಷ್ಟ್ರಕ್ಕೆ ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ‘ನಿಸರ್ಗ’ ಚಂಡಮಾರುತ ಅಪ್ಪಳಿಸಿತ್ತು. ಇದೀಗ ಮತ್ತೊಮ್ಮೆ ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಸಂಭವವಿದ್ದು ಚಂಡಮಾರುತ ಉಂಟಾಗುವ ಮುನ್ಸೂಚನೆ ದೊರಕಿದೆ.
ಈ ಬಾರಿ ಭಾರತದಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಜೂನ್ 1ರಿಂದ ಸೆಪ್ಟೆಂಬರ್ ಅಂತ್ಯದ ತನಕ ಮಾನ್ಸೂನ್ ಅವಧಿಯಾಗಿದೆ. ಈಗಾಗಲೇ ಕೇರಳ ಪ್ರವೇಶಿಸಿರುವ ನೈಋತ್ಯ ಮುಂಗಾರು ಮಾರುತ ಮುಂದಿನ ಎರಡು ಮೂರು ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ಪುದುಚೇರಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯನ್ನು ಸುರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.