24 ಲಕ್ಷಕ್ಕೆ ಹರಾಜಾಯ್ತು 21 ಕೆಜಿ ಬಾಳಾಪುರ್ ಗಣೇಶ ಲಡ್ಡು….
ಹೈದರಾಬಾದ್ ನ ಜನಪ್ರಿಯ 21 ಕೆಜಿ ತೂಕದ ಬಾಳಾಪುರ ಗಣೇಶ್ ಲಡ್ಡು ಶುಕ್ರವಾರ ಸಾರ್ವಕಾಲಿಕ ದಾಖಲೆಯ 24.60 ಲಕ್ಷ ರೂ.ಗೆ ಹರಾಜಾಗಿದೆ. ಉದ್ಯಮಿ ಹಾಗೂ ಬಾಳಾಪುರ ಗಣೇಶ ಉತ್ಸವ ಸಮಿತಿ ಸದಸ್ಯ ವಿ ಲಕ್ಷ್ಮ ರೆಡ್ಡಿ ಲಡ್ಡು ಖರೀದಿಸಿದ್ದಾರೆ.
ಹರಾಜಿನಲ್ಲಿ ಮೂವರು ಸ್ಥಳೀಯರಲ್ಲದವರು ಸೇರಿದಂತೆ ಒಟ್ಟು ಒಂಬತ್ತು ಬಿಡ್ಡರ್‌ಗಳು ಭಾಗವಹಿಸಿದ್ದರು. ಕಳೆದ ವರ್ಷ ಲಡ್ಡು 18.90 ಲಕ್ಷ ರೂಗೆ ಹರಾಜಾಗಿತ್ತು. ಲಡ್ಡು ಅವರಿಗೆ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಸ್ಥಳೀಯರು ನಂಬುತ್ತಾರೆ.
ಹೈದ್ರಾಬಾದ್ ನಗರದ ಹೊರವಲಯದಲ್ಲಿರುವ ಬಾಳಾಪುರ ಗ್ರಾಮದಲ್ಲಿ ವಾರ್ಷಿಕವಾಗಿ ನಡೆಯುವ ಗಣೇಶ ವಿಸರ್ಜನೆ ಮೆರವಣಿಗೆಯು ನಗರದ ಹೃದಯ ಭಾಗದಲ್ಲಿರುವ ಹುಸೇನಸಾಗರ ಕೆರೆಗೆ ಆಗಮಿಸಿ ನಗರದ ವಿವಿಧ ಭಾಗಗಳಲ್ಲಿ ಸಾಗುತ್ತದೆ.
ಪ್ರತಿ ವರ್ಷ ಹರಾಜು ಆಯೋಜಿಸುವ ಬಾಳಾಪುರ ಗಣೇಶ ಉತ್ಸವ ಸಮಿತಿ ಪ್ರಕಾರ 1994ರಲ್ಲಿ ನಡೆದ ಮೊದಲ ಹರಾಜಿನಲ್ಲಿ 450 ರೂ.ಗೆ ಲಡ್ಡು ಮಾರಾಟವಾಗಿತ್ತು.
ಕೋಲನು ಮೋಹನ್ ರೆಡ್ಡಿ ಅವರು 1994 ರಲ್ಲಿ ಮೊದಲ ಹರಾಜಿನಲ್ಲಿ ಲಡ್ಡುವನ್ನು ಖರೀದಿಸಿದ್ದರು ಮತ್ತು ಸತತ ಐದು ವರ್ಷಗಳ ಕಾಲ ಯಶಸ್ವಿ ಹರಾಜಿನಲ್ಲಿ ಗೆದ್ದಿದ್ದರು. ಬಿಡ್ ಗೆಲ್ಲುವ ಮೂಲಕ ಸಮೃದ್ಧಿ ಹೊಂದಿದ್ದಾಗಿ ಅವರು ಹೇಳಿಕೊಂಡಿದ್ದರಿಂದ, ಲಡ್ಡು ಹರಾಜು ಹೆಚ್ಚು ಜನಪ್ರಿಯವಾಯಿತು.








