ಭಾರತದಲ್ಲಿಐಪೋನ್ ಉತ್ಪಾದಿಸಲು ಟಾಟಾ ಚಿಂತನೆ..?? ತೈವಾನ್ ಕಂಪನಿ ಜೊತೆ ಒಪ್ಪಂದ..
ಆಪಲ್ ಕಂಪನಿ ಇತ್ತೀಚೆಗಷ್ಟೆ ತನ್ನ ಐಪೋನ್ 14 ಸರಣಿಯನ್ನ ಬಿಡುಗಡೆ ಮಾಡಿದೆ. ಆಪಲ್ ಕಡೆಯಿಂದ ಇದೀಗ ಹೊಸದೊಂದು ಸುದ್ದಿ ಹೊರಬರುತ್ತಿದ್ದು, ಟಾಟಾ ಗ್ರೂಪ್ ಭಾರತದಲ್ಲಿ ಐಫೋನ್‌ಗಳನ್ನ ತಯಾರಿಸಲು ಯೋಜಿಸುತ್ತಿದೆ ಮತ್ತು ಇದಕ್ಕಾಗಿ ಕಂಪನಿ ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪೊರೇಶನ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್‌ನ ಮತ್ತೊಂದು ವರದಿ ಹೇಳಿದೆ.
ಆಪಲ್‌ಗೆ ಪೂರೈಕೆದಾರರಾದ ವಿಸ್ಟ್ರಾನ್ ಜೊತೆಗೆ ಮಾತುಕತೆಗಳು ಒಪ್ಪಂದಕ್ಕೆ ಬಂದರೆ, ಟಾಟಾ ಗ್ರೂಪ್‌ನೊಂದಿಗೆ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಜಂಟಿ ಉದ್ಯಮವನ್ನು ಸ್ಥಾಪಿಸಲಾಗುತ್ತದೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ಮಾತುಕತೆಗಳು ಫಲ ನೀಡಿದರೆ, ಟಾಟಾ ಗ್ರೂಪ್ ಭಾರತದಲ್ಲಿ ಆಪಲ್ ಐಫೋನ್‌ಗಳನ್ನು ತಯಾರಿಸುವ ಮೊದಲ ಭಾರತೀಯ ಕಂಪನಿಯಾಗಬಹುದು ಎಂದು ನಂಬಲಾಗಿದೆ.
ಯೋಜನೆಯು ಯಶಸ್ವಿಯಾದ ನಂತರ, ಟಾಟಾ ಗ್ರೂಪ್ ಭಾರತದಲ್ಲಿ ವಿಸ್ಟ್ರಾನ್‌ನ ಕಾರ್ಯಾಚರಣೆಗಳಲ್ಲಿ ಈಕ್ವಿಟಿಯನ್ನು ಖರೀದಿಸುವ ಸಾಧ್ಯತೆಯಿದೆ ಮತ್ತು ಎರಡೂ ಕಂಪನಿಗಳು ದೇಶದಲ್ಲಿ ಅಸೆಂಬ್ಲಿ ಘಟಕವನ್ನು ನಿರ್ಮಿಸಬಹುದು.
ಆದರೆ , ಟಾಟಾ ಗ್ರೂಪ್ ಮತ್ತು ಆಪಲ್ ಎರಡೂ ಕಂಪನಿಗಳು ಮಾತುಕತೆಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ. ಆದರೆ ವಿಸ್ಟ್ರಾನ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಬ್ಲೂಮ್‌ಬರ್ಗ್‌ನ ವಿನಂತಿಯನ್ನು ನಿರಾಕರಿಸಿದೆ.








