ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರಿಗೆ ಸಿ ಎಂ ಕಛೇರಿಯಲ್ಲಿ ಕೆಲಸ… – ಸಿ ಎಂ ಬೊಮ್ಮಾಯಿ
ದುಷ್ಕರ್ಮಿಗಳ ದಾಳಿಯಿಂದ ಜೀವ ಕಳೆದುಕೊಂಡದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಬ್ಬರಿಗೆ ಸಿ ಎಂ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಶನಿವಾರ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ವೇಳೆ ಸಿಎಂ ಬೊಮ್ಮಾಯಿ ಈ ಘೋಷಣೆ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಅವರು ಬಿಜೆಪಿ ಕಾರ್ಯಕರ್ತ. ಇದರಿಂದಾಗಿ ಕೆಲಸ ಕೊಡುವುದು ನಮ್ಮ ಕರ್ತವ್ಯ. ಸಿಎಂ ಕಚೇರಿಯಲ್ಲೇ ಕೆಲಸ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹಾಗೂ ಸಚಿವ ಉಮೇಶ್ ಕತ್ತಿ ಅವರ ಚಿತ್ರವನ್ನು ಹಾಕುವ ಮೂಲಕ ಬಿಜೆಪಿ(BJP) ಗೌರವ ಸಲ್ಲಿಸಿತ್ತು.
ಪಕ್ಷದ ಹಿರಿಯ ನಾಯಕರ ಸಲಹೆ ಮೇರೆಗೆ ರ್ಯಾಲಿಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದರಿಂದ ಬಿಜೆಪಿ ತನ್ನನ್ನು ತಾನು ಕಾರ್ಯಕರ್ತರ ಪಕ್ಷ ಎಂದು ಸಾಬೀತುಪಡಿಸಿದೆ ಎಂದು ಸಮಾವೇಶ ಆಯೋಜಕರಲ್ಲಿ ಪ್ರಮುಖರಾದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.
ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಹತ್ಯೆ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.








