ಪ್ರಭಾಸ್ ದೊಡ್ಡಪ್ಪ, ಟಾಲಿವುಡ್ ರೆಬೆಲ್ ಸ್ಟಾರ್ ಕೃಷ್ಣಂ ರಾಜು ನಿಧನ…
ಟಾಲಿವುಡ್ ನಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ನಟ ಪ್ರಭಾಸ ಅವರ ದೊಡ್ಡಪ್ಪ ಮಾಜಿ ಕೇಂದ್ರ ಸಚಿವ ಕೃಷ್ಣಂ ರಾಜು ಅವರು ನಿಧನರಾಗಿದ್ದಾರೆ. 82 ವರ್ಷ ವಯಸ್ಸಿನ ಅವರು ವಯೋ ಸಹಜ ಕಾಯಿಲೆಗಳಿಂದ ಮುಂಜಾನೆ 3.25 ಗಂಟೆಗೆ ನಿಧನರಾಗಿದ್ದಾರೆ. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೃಷ್ಣಂರಾಜು ನಿಧನಕ್ಕೆ ಹಲವು ಸಿನಿ ನಟರು, ಗಣ್ಯರು ಮತ್ತು ಅಭಿಮಾನಿಗಳು ಟ್ವೀಟ್ ಮೂಲಕ ತಮ್ಮ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ.
ನಟ, ಪತ್ರಕರ್ತ, ಛಾಯಾಗ್ರಾಹಕರಾಗಿ ಕೃಷ್ಣಂರಾಜು ಜನಪ್ರಿಯರಾಗಿದ್ದರು. ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸಹ ಕೃಷ್ಣಂರಾಜು ಅವರ ಹತ್ತಿರದ ಸಂಬಂಧಿ. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ 1940ರಲ್ಲಿ ಕೃಷ್ಣಂರಾಜು ಜನಿಸಿದರು. 1966ರಲ್ಲಿ ‘ಚಿಲಕ ಗೋರಿಂಕಾ’ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣಹಚ್ಚಿದ್ದರು. ಸುಮಾರು 183 ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣಂರಾಜು ಅವರು ಕೊನೆಯ ಚಿತ್ರ ‘ರಾಧೇ ಶ್ಯಾಮ್’. ಇದರಲ್ಲಿ ಪ್ರಭಾಸ್ ನಾಯಕರಾಗಿದ್ದರು.
ಕೃಷ್ಣರಾಜು ಅವರಿಗೆ ಹಲವು ಬಾರಿ ಫಿಲ್ಂಫೇರ್ ಮತ್ತು ನಂದಿ ಪ್ರಶಸ್ತಿಗಳು ಸಂದಿವೆ. ಭಕ್ತ ಕಣ್ಣಪ್ಪ, ಬೊಬ್ಬಿಲಿ ಬ್ರಹ್ಮಣ್ಣ, ಬಾವ ಬಾವಮರ್ದಿ, ಧರ್ಮಾತ್ಮುಡು, ಜೀವನ ತರಂಗಾಲು ಕೃಷ್ಣವೇಣಿ ಸೇರಿದಂತೆ ಕೃಷ್ಣಂರಾಜು ಅಭಿನಯದ ಪ್ರಮುಖ ಸಿನಿಮಾಗಳು…