‘ದಲಿತ’ ಎಂಬ ಪದ ಬಳಸದಂತೆ ಸರ್ಕಾರದಿಂದ ಆದೇಶ
ಬೆಂಗಳೂರು, ಜೂನ್ 5: ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಸರ್ಕಾರದ ವ್ಯವಹಾರ ಮತ್ತು ಯಾವುದೇ ಪ್ರಮಾಣ ಪತ್ರದಲ್ಲಿ ‘ದಲಿತ’ ಎನ್ನುವ ಪದ ಬಳಸದಂತೆ ಸಮಾಜ ಕಲ್ಯಾಣ ಇಲಾಖೆಯು ಆದೇಶಿಸಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ. ಈ ಹಿಂದೆಯೇ ಕೇಂದ್ರ ಸರ್ಕಾರ ಆಡಳಿತ ಭಾಷೆ, ಪತ್ರ ವ್ಯವಹಾರ, ಪ್ರಮಾಣ ಪತ್ರಗಳಲ್ಲಿ ‘ದಲಿತ’ ಎನ್ನುವ ಪದವನ್ನು ಬಳಸಬಾರದು ಎಂದು ಆದೇಶ ಹೊರಡಿಸಿತ್ತು ಎಂದು ಕರ್ನಾಟಕ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡಬಾರದು ಎಂದು ಸೂಚಿಸಲಾಗಿದ್ದು, ಆಂಗ್ಲ ಭಾಷೆಯಲ್ಲಿ ಎಸ್.ಸಿ/ ಎಸ್.ಟಿ ಎಂದು ನಮೂದಿಸಬಹುದಾಗಿದೆ ಮತ್ತು ಇತರೇ ಭಾಷೆಗಳಲ್ಲಿ ಸೂಕ್ತ ಭಾಷಾಂತರಗೊಳಿಸಿದ ಪದವನ್ನು ಬಳಸಬೇಕು ಎಂದು ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಎಂದು ನಮೂದಿಸಬಹುದಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.