ಶೃಂಗಾರ್ ಗೌರಿ ವಾದಕ್ಕೆ ಅಸ್ತು ಎಂದ ಕೋರ್ಟ್ – ಮುಸ್ಲಿಂ ಕಡೆಯ ಆಕ್ಷೆಪಣೆ ತಿರಸ್ಕರಿಸಿದ ಕೋರ್ಟ್….
ವಾರಣಾಸಿಯ ಜ್ಞಾನವಾಪಿ – ಶೃಂಗಾರ್ ಗೌರಿ ವಿವಾದದ ಮುಂದಿನ ವಿಚಾರಣೆ ಮುಂದುವರಿಯಲಿದೆ. ಈ ಪ್ರಕರಣವು ವಿಚಾರಣೆಗೆ ಯೋಗ್ಯವಾಗಿದೆ ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಹೇಳಿದೆ. ಪ್ರಕರಣದ ವಿಚಾರಣೆ ನಡೆಸದಂತೆ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣವು 1991 ರ ಆರಾಧನಾ ಕಾಯಿದೆ ಅಡಿಯಲ್ಲಿ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೀಗ ವಾರಣಾಸಿ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ 22 ರಂದು ಮುಂದಿನ ವಿಚಾರಣೆ ನಡೆಸಲಿದೆ.
ನ್ಯಾಯಾಲಯದ ತೀರ್ಪಿನ ವೇಳೆ, ಹಿಂದೂ ಪರ ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಶಂಕರ್ ಜೈನ್ ನ್ಯಾಯಾಲಯದಲ್ಲಿ ಹಾಜರಿದ್ದರು. ಆದರೆ, ಮುಖ್ಯ ಅರ್ಜಿದಾರ ರಾಖಿ ಸಿಂಗ್ ಹಾಜರಾಗಿರಲಿಲ್ಲ. ನ್ಯಾಯಾಲಯದಲ್ಲಿ ಒಟ್ಟು 62 ಮಂದಿಗೆ ಹಾಜರಾಗಲು ನ್ಯಾಯಾಧೀಶರು ಅವಕಾಶ ನೀಡಿದ್ದರು. ಆಗಸ್ಟ್ 24 ರಂದು, ಈ ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಂ ಕಡೆಯ ವಾದಗಳು ಪೂರ್ಣಗೊಂಡವು. ಇದಾದ ಬಳಿಕ ವಾರಣಾಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ತೀರ್ಪನ್ನು ಸೆಪ್ಟೆಂಬರ್ 12ಕ್ಕೆ ಅಂದರೆ ಇಂದಿನವರೆಗೆ ಕಾಯ್ದಿರಿಸಿದ್ದರು.
ನಗರದಲ್ಲಿ ಹೈ ಅಲರ್ಟ್, ಸೆಕ್ಷನ್ 144 ಜಾರಿ,
ವಾರಣಾಸಿ ಪೊಲೀಸ್ ಕಮಿಷನರ್ ಎ ಸತೀಶ್ ಗಣೇಶ್ ಅವರು ತೀರ್ಪಿಗೆ ಮುನ್ನ, ‘ನಗರದ ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ನಗರದಲ್ಲಿ ಹಿಂದೂ-ಮುಸ್ಲಿಮರ ಮಿಶ್ರ ಜನಸಂಖ್ಯೆಯಿರುವ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಆದೇಶದ ನಂತರ ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರು ನಿನ್ನೆ ರಾತ್ರಿಯಿಂದಲೇ ಕೆಲವೆಡೆ ಗಸ್ತು ಹೆಚ್ಚಿಸಿದ್ದರು.
ತೀರ್ಪಿನ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗಿತ್ತು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವನ್ನು ನಿಯೋಜಿಸಲಾಗಿದ್ದು, ವಿಶೇಷ ನಿಗಾ ಇರಿಸಲಾಗಿದೆ.
ಏನಿದು ಜ್ಞಾನವಪಿ-ಶೃಂಗಾರ್ ಗೌರಿಗೆ ಪ್ರಕರಣ ?
ಐವರು ಹಿಂದೂ ಮಹಿಳೆಯರು ಜ್ಞಾನವಾಪಿ ಮಸೀದಿ ಆವರಣದಲ್ಲಿ ಇರುವ ಹಿಂದೂ ದೇವತೆಗಳನ್ನು ಪೂಜಿಸಲು ಅನುಮತಿ ಕೋರಿದ್ದರು. ಈ ಮಹಿಳೆಯರು ವಿಶೇಷವಾಗಿ ಶೃಂಗಾರ್ ಗೌರಿಯನ್ನು ಪ್ರತಿದಿನ ಪೂಜಿಸಲು ಅನುಮತಿ ಕೋರಿದರು. ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಯಲ್ಲೂ ಸಮೀಕ್ಷೆ ನಡೆಸಲಾಗಿತ್ತು.








