ವಾಷಿಂಗ್ಟನ್: ಜೂನ್ 5: ಅಮೆರಿಕದಲ್ಲಿ ಜನಾಂಗೀಯ ಘರ್ಷಣೆಗೆ ಕಾರಣಕರ್ತನಾದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನ ಮರಣೋತ್ತರ ವರದಿ ಬಂದಿದ್ದು, ಆತನಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ತಿಳಿದು ಬಂದಿದೆ.
ಜಾರ್ಜ್ ಫ್ಲಾಯ್ಡ್ ನ ಕುಟುಂಬದಿಂದ ಅನುಮತಿ ಪಡೆದು ವೈದ್ಯ ಆಂಡ್ರ್ಯೂ ಬೇಕರ್ ಈ ಮಾಹಿತಿ ನೀಡಿದ್ದು, ಫ್ಲಾಯ್ಡ್ ಗೆ ಲಕ್ಷಣ ರಹಿತ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಹೃದಯ ಸಮಸ್ಯೆ ಇರುವುದಾಗಿಯೂ ಮರಣೋತ್ತರ ವರದಿಯಲ್ಲಿ ತಿಳಿಸಲಾಗಿದೆ.
ಮರಣೋತ್ತರ ವರದಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದು, ಘಟನೆಯಿಂದ ಫ್ಲಾಯ್ಡ್ ಗೆ ಹೃದಯಾಘಾತ ಸಂಭವಿಸಿತ್ತು ಎಂಬ ಅಂಶವನ್ನೂ ದಾಖಲು ಮಾಡಲಾಗಿದೆ. ಇದೊಂದು ಹತ್ಯೆಯಾಗಿದೆ ಎಂದು ಮರಣೋತ್ತರ ವರದಿಯಲ್ಲಿ ಹೇಳಲಾಗಿದೆ.

ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಅಮೆರಿಕಾದ ಪೊಲೀಸ್ ಅಧಿಕಾರಿ ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ್ ನನ್ನು ಬಂಧಿಸಿದ್ದರು. ಅಲ್ಲದೆ, ಫ್ಲಾಯ್ಡ್ ಕುತ್ತಿಗೆಯನ್ನು ತನ್ನ ಮೊಣಕಾಲಿನಿಂದ ಅದುಮಿ ಹಿಡಿದು, ಉಸಿರುಗಟ್ಟಿಸಿ ಸಾಯಿಸಿದ್ದರು. ಫ್ಲಾಯ್ಡ್ ನನ್ನು ಹಿಂಸೆ ನೀಡಿ ಸಾವನ್ನಪ್ಪುವಂತೆ ಮಾಡಿದ ಪೊಲೀಸ್ ಅಧಿಕಾರಿಯ ಮೇಲೆ ರೊಚ್ಚಿಗೆದ್ದ ಸಾರ್ವಜನಿಕರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.








