ಹೊಸದಿಲ್ಲಿ, ಜೂನ್ 5 : ಹಣಕಾಸಿನ ಜಾಗತಿಕ ರೇಟಿಂಗ್ ಸಂಸ್ಥೆಯಾದ ಮೂಡೀಸ್ ಇನ್ವೇಸ್ಟರ್ಸ್ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಸಿಯುತ್ತಿರುವ ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಭಾರತದಲ್ಲಿ ಅತೀ ಸಣ್ಣ ಹಾಗೂ ಸಣ್ಣ ಮಟ್ಟದ ವ್ಯಾಪಾರಿಗಳ ಪರಿಸ್ಥಿತಿ ಹೆಚ್ಚಿನ ಪ್ರಮಾಣದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದು, ಇದು ಆದಷ್ಟು ಬೇಗನೆ ಚೇತರಿಕೆ ಕಾಣದಿದ್ದರೆ ಹಣಕಾಸು ಪರಿಸ್ಥಿತಿ ಅಪಾಯಕ್ಕೆ ಸಿಲುಕಿ ಭಾರತದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಹೇಳಿದೆ.
ಲಾಕ್ ಡೌನ್ ಜಾರಿಯಾಗುವ ಮೊದಲೇ ಭಾರತದಲ್ಲಿ ಕೆಲವು ವಲಯಗಳು ಸಂಕಷ್ಟದಲ್ಲಿದ್ದು, ಲಾಕ್ ಡೌನ್ ನಂತರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವ್ಯಾಪಾರಗಳ ಪರಿಸ್ಥಿತಿಯೂ ಹದಗೆಟ್ಟಿದೆ ಎಂದು ಮೂಡೀಸ್ ಹೇಳಿದೆ.
ಚೇತರಿಕೆ ಕಾಣದ ಬೆಳವಣಿಗೆ, ದುರ್ಬಲ ಹಣಕಾಸಿನ ಪರಿಸ್ಥಿತಿ ಮತ್ತು ಅರ್ಥಿಕ ವಲಯದಲ್ಲಿ ಹೆಚ್ಚುತ್ತಿರುವ ಒತ್ತಡಗಳಿಂದ ದೇಶದ ನೀತಿ ನಿರೂಪಿಸುವ ಸಂಸ್ಥೆಗಳು ದೊಡ್ಡ ಮಟ್ಟಿನಲ್ಲಿ ಸವಾಲುಗಳನ್ನು ಎದುರಿಸಲಿವೆ ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಹೇಳಿದೆ.
2019 ರ ನವೆಂಬರ್‌ನಿಂದ ಭಾರತದಲ್ಲಿ ಆರ್ಥಿಕತೆ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ರೇಟ್ ಮಾಡಲಾದ ಹಣಕಾಸೇತರ ಕಂಪೆನಿಗಳಲ್ಲಿ ಶೇ 80 ಕ್ಕಿಂತಲೂ ಹೆಚ್ಚು ಋಣಾತ್ಮಕ ದೃಷ್ಟಿಕೋನಗಳು ಕಂಡು ಬಂದಿವೆ. ಭಾರತದ ಅರ್ಥಿಕತೆಯು ನಿಧಾನಗತಿಯ ಬೆಳವಣಿಗೆಯ ದೀರ್ಘಕಾಲದ ಅವಧಿಗೆ ಮುಂದುವರಿದಿದೆ ಎಂದು ಮೂಡಿಸ್ ಕಳವಳ ವ್ಯಕ್ತಪಡಿಸಿದೆ.








