ಹೊಸದಿಲ್ಲಿ, ಜೂನ್ 5 : ದೆಹಲಿ ಮೆಟ್ರೋ ರೈಲು ನಿಗಮದ 20 ಸಿಬ್ಬಂದಿಗಳಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಗು ಸಿಂಗ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ.
ಡಿಎಂಆರ್’ಸಿ ಸಿಬ್ಬಂದಿಗಳು ಕೂಡ ದೇಶದ ಇತರ ಜನರಂತೆಯೇ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಎಲ್ಲರೂ ಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಂಗು ಸಿಂಗ್ ಹೇಳಿದ್ದಾರೆ.
ಡಿಎಂಆರ್’ಸಿ ಸಿಬ್ಬಂದಿಗಳಿಗೆ ಶುಕ್ರವಾರ ಸಂದೇಶವನ್ನು ಕಳುಹಿಸಿರುವ ಮಂಗು ಸಿಂಗ್ ಉದ್ಯೋಗಿಗಳಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಮತ್ತು ಕೊರೊನಾ ವೈರಸ್ ಸೋಂಕಿಗೆ ಒಳಗಾದವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಬೇಕೆನ್ನುವ ನಿಮ್ಮಲ್ಲಿನ ಉತ್ಸಾಹ ಹೀಗೆಯೇ ಇರಲಿ. ಕೆಲವೇ ದಿನಗಳಲ್ಲಿ ಮೆಟ್ರೋ ರೈಲು ಸಂಚಾರ ಪುನಃ ಆರಂಭವಾಗಲಿದೆ ಎಂದು ಮಂಗು ಸಿಂಗ್ ಉದ್ಯೋಗಿಗಳಿಗೆ ಹೇಳಿದ್ದಾರೆ. ದೆಹಲಿ ಮೆಟ್ರೋ ರೈಲು ನಿಗಮ ತನ್ನ ಪ್ರಕಟಣೆಯಲ್ಲಿ ಎನ್‌ಸಿಆರ್‌ನಲ್ಲಿ ವಾಸ್ತವ್ಯ ಹೂಡಿದ್ದ 20 ಸಿಬ್ಬಂದಿಗಳಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಅವರು ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಡಿಎಂಆರ್‌ಸಿ ಉದ್ಯೋಗಿಗಳಲ್ಲಿ ಮೆಟ್ರೋ ಸೇವೆ ಆರಂಭಿಸುವ ಉತ್ಸಾಹ ಹೆಚ್ಚಿದೆ ಎಂದು ತಿಳಿಸಲಾಗಿದೆ.








