ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣದ ವೆಬ್ ಸಿರೀಸ್ ‘ಟ್ರಪಲ್ ಎಕ್ಸ್-2’ ನಲ್ಲಿ ಭಾರತೀಯ ಸೇನೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸೇನೆಯ ಕೆಲವು ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೆಬ್ ಸೀರೀಸ್‌ನಲ್ಲಿ ಅನುಚಿತವಾದ ಹಾಗೂ ಅಸಭ್ಯಕರ ದೃಶ್ಯ ಹಾಗೂ ಸಂಭಾಷಣೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಗುರುಗ್ರಾಮದ ಪಾಲಮ್ ವಿಹಾರದಲ್ಲಿನ ಪೊಲೀಸ್ ಠಾಣೆಗೆ ಮಾಜಿ ಸೈನಿಕರು ದೂರು ಸಲ್ಲಿಸಿದ್ದಾರೆ.
ಈ ವೆಬ್ ಸೀರೀಸ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹುತಾತ್ಮರ ಕಲ್ಯಾಣ ಪ್ರತಿಷ್ಠಾನದ (ಎಂಡಬ್ಲ್ಯೂಎಫ್) ಅಧ್ಯಕ್ಷ ಮೇಜರ್ ಟಿಸಿ ರಾವ್, ‘ಈ ಸೀರೀಸ್ ನಮ್ಮ ಸಶಸ್ತ್ರ ಸೇನಾ ಪಡೆಯನ್ನು ಕೀಳಾಗಿ ತೋರಿಸುವ ಮೂಲಕ ಅವರ ನೈತಿಕ ಶಕ್ತಿಯನ್ನು ಕುಸಿಯುವಂತೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಅಲ್ಲದೆ ದೇಶಕ್ಕಾಗಿ ಸೈನಿಕರು ಪ್ರಾಣತ್ಯಾಗ ಮಾಡುತ್ತಾರೆ. ಆದರೆ ಈ ಸೀರೀಸ್ ನ ನಿರ್ಮಾಪಕರು ಮತ್ತು ನಿರ್ದೇಶಕರು ಸೈನಿಕರು ದೂರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವರ ಹೆಂಡತಿಯರು ಮನೆಯಲ್ಲಿ ಪರಪುರುಷರೊಂದಿಗೆ ಸಂಬಂಧ ಇರಿಸಿಕೊಳ್ಳುತ್ತಾರೆ ಎಂದು ಕೆಟ್ಟದಾಗಿ ಚಿತ್ರಿಸಿದ್ದಾರೆ’ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ‘ಸಮವಸ್ತ್ರದಲ್ಲಿರುವ ಸೈನಿಕರು, ಅಶೋಕ ಸ್ತಂಬ ಮತ್ತು ತಾಜ್ ಸಂಕೇತಗಳನ್ನು ಹರಿದು ಹಾಕುವಂತಹ ದೃಶ್ಯಗಳು ಈ ವೆಬ್ ಸೀರೀಸ್ ನಲ್ಲದೆ. ಇದು ನಮ್ಮ ಸೇನಾ ಪಡೆ ಹಾಗೂ ಸೈನಿಕರಿಗೆ ಮಾಡಿರುವ ಅವಮಾನ’ ಎಂದು ಟಿಸಿ ರಾವ್ ಕಿಡಿಕಾರಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ವೆಬ್ ಸೀರೀಸ್ ವಿರುದ್ಧ ಹಿಂದಿ ಬಿಗ್ ಬಾಸ್ 13ನೇ ಸೀಸನ್ ನ ಸ್ಪರ್ಧಿಯಾಗಿದ್ದ ಹಿಂದೂಸ್ಥಾನಿ ಭಾವು ಕೂಡ ದೂರು ನೀಡಿದ್ದರು.