ಹೈದರಾಬಾದ್, ಜೂನ್ 6 : ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದಾಗಿದ್ದ ತಿರುಪತಿ ತಿಮ್ಮಪ್ಪನ ದರ್ಶನ ಜೂನ್ 11ರಿಂದ ಭಕ್ತರಿಗೆ ಸಿಗಲಿದೆ. ಕಳೆದ 50 ದಿನಗಳಿಂದ ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು.
ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ 6,000 ಮಂದಿಗೆ ಮಾತ್ರ ಅವಕಾಶ ಸೀಮಿತಗೊಳಿಸಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕೊರೋನಾ ಸೋಂಕಿನ ಮಾರ್ಗಸೂಚಿಯಂತೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗುತ್ತಿದೆ. ಟಿಟಿಡಿಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸಿ ಭಕ್ತರ ಸರದಿಯನ್ನು ನಿರ್ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ದೇಗುಲದೊಳಕ್ಕೆ ಒಂದು ಗಂಟೆಗೆ 500 ಭಕ್ತರ ದರ್ಶನಕ್ಕೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ (ಟಿಟಿಡಿ) ಮುಖ್ಯಸ್ಥ ವೈ.ವಿ. ಸುಬ್ಟಾ ರೆಡ್ಡಿ ತಿಳಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗಳನ್ನು ರಚಿಸಲಾಗಿದೆ.
ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದ್ದು, ಪ್ರತಿದಿನ 3 ಸಾವಿರ ಮಂದಿ ಭಕ್ತರಿಗೆ ಮಾತ್ರ ಬೆಟ್ಟ ಹತ್ತಲು ಅನುಮತಿ ನೀಡಲಾಗುವುದು.
ಬೆಟ್ಟವೇರಿದ ಬಳಿಕ ಭಕ್ತರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ ಮತ್ತು ದೇಗುಲಕ್ಕೆ ಆಗಮಿಸುವ ಭಕ್ತರ ಗಂಟಲು ದ್ರವವನ್ನು ಸ್ವಯಂಪ್ರೇರಿತವಾಗಿ ಯಾದೃಚ್ಛಿಕ ವಿಧಾನದಲ್ಲಿ ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಲು ತೀರ್ಮಾನಿಸಲಾಗಿದೆ.