ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ‘ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘ’ದ ಸಹಯೋಗದಲ್ಲಿ ಫೆಬ್ರವರಿ 22 ರಿಂದ 25 ರವರೆಗೆ 4 ದಿನಗಳ ಕುಸ್ತಿಹಬ್ಬವನ್ನು ಹಮ್ಮಿಕೊಂಡಿದೆ. ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ‘ಕರ್ನಾಟಕ ಕುಸ್ತಿ ಹಬ್ಬ’ ನಡೆಯಲಿದೆ. ದೇಶದ ಹೆಸರಾಂತ ಸುಮಾರು 1200 ಕ್ಕೂ ಹೆಚ್ಚು ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ 3 ಅಖಾಡಗಳಲ್ಲಿ 30 ಪ್ರತ್ಯೇಕ ತೂಕಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಜಾರ್ಜಿಯಾ, ಇರಾನ್ ದೇಶಗಳ ಕುಸ್ತಿಪಟುಗಳ ಜೊತೆಗೆ ಒಲಂಪಿಕ್ ಪದಕ ವಿಜೇತ್, ಯೋಗೇಶ್ವರ ದತ್, ಅರ್ಜುನ್ ಪ್ರಶಸ್ತಿ ಐಜಿಪಿ ಕರ್ತಾರ ಸಿಂಗ್, ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್, ಅಂತರಾಷ್ಟ್ರೀಯ ಕುಸ್ತಿಪಟು ಮಹ್ಮದ ಮುರಾಡಿ, ಭಾರತ ಕೇಸರಿ ಉಮೇಶ ಚೌದರಿ, ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳಾದ ಅಂಶು ಮಲ್ಲಿಕ್, ಜೈಲಾ ನಾಗೀಜಡೆ, ನೈನಾ, ಸಭೀರಾ ಅಲಿಯೆವಾ ಅಲಹವರ್ಡಿ ಮೊದಲಾದ ಹೆಸರಾಂತ ಕುಸ್ತಿ ಪಟುಗಳು ಈ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಯುವ ಪ್ರತಿಭೆಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಕುಸ್ತಿ ಹಬ್ಬವನ್ನು ಆಚರಿಸುತ್ತಿದೆ.
ನೋಂದಣಿ ಯಾವಾಗ? ಎಲ್ಲಿ?
ಫೆ. 22 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆ ಧಾರವಾಡ ಕರ್ನಾಟಕ ಕಾಲೇಜು ಮೈದಾನದಲ್ಲಿ ಕುಸ್ತಿಪಟುಗಳ ದೇಹ ತೂಕವನ್ನು ತೆಗೆದುಕೊಳ್ಳಲಾಗುವುದು. ವಯೋಮಿತಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಜನನ ನೋಂದಣಿ ಅಧಿಕಾರಿಗಳಿಂದ ಜನನ ಪ್ರಮಾಣ ಪತ್ರ, ಆಧಾರಕಾರ್ಡ್, 4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹಾಗೂ ಬ್ಯಾಂಕ್ ಖಾತೆಯ ಪ್ರತಿಯನ್ನು ತರಬೇಕು. 9964245769, 7892042714, 9481966245 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.








