ಬೆಂಗಳೂರು, ಜೂನ್ 6: 2020ರ ಸಾಲಿನ ಪ್ರತಿಷ್ಠಿತ ಅರ್ನ್ಸ್ಟ್ ಆಯಂಡ್ ಯಂಗ್ (ಇವೈ) ಜಾಗತಿಕ ಉದ್ಯಮಿ ಪ್ರಶಸ್ತಿಗೆ ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಭಾಜನರಾಗಿದ್ದಾರೆ.
20 ವರ್ಷಗಳ ಇತಿಹಾಸವುಳ್ಳ ಈ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ದೇಶದ ಮೊದಲ ಮತ್ತು ವಿಶ್ವದ ಎರಡನೇ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ ಪ್ರಶಸ್ತಿ ಪಡೆದ ಮೂರನೇ ಭಾರತೀಯರು ಇವರಾಗಿದ್ದಾರೆ. ಈ ಮೊದಲು 2005ರಲ್ಲಿ ಇನ್ಫೊಸಿಸ್‌ನ ಸಹ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಮತ್ತು 2014 ರಲ್ಲಿ ಕೋಟಕ್ ಮಹೀಂದ್ರಾದ ಉದಯ್ ಕೋಟಕ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಗುರುವಾರ ರಾತ್ರಿ ವರ್ಚುವಲ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಕಿರಣ್ ಅವರು ‘ಇವೈ’ ಜಾಗತಿಕ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್ ವಹಿವಾಟಿನಲ್ಲಿ ಜಾಗತಿಕ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದ್ದು, ಜೀವ ರಕ್ಷಕ ಔಷಧಿಗಳು ಎಲ್ಲೆಡೆ ದೊರೆಯಬೇಕು ಎನ್ನುವುದು ಕಂಪನಿಯ ಧ್ಯೇಯವಾಗಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.