Bangalore | ವಿದ್ಯುತ್ ಬೆಲೆ ಏರಿಕೆಗೆ ಭಾಸ್ಕರ್ ರಾವ್ ವಿರೋಧ
ಬೆಂಗಳೂರು : ಅಕ್ಟೋಬರ್ 1ರಿಂದ ವಿದ್ಯುತ್ ದರವನ್ನು ಏರಿಕೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಶೀಘ್ರವೇ ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಭಾಸ್ಕರ್ ರಾವ್, “ಕಲ್ಲಿದ್ದಲು ಬೆಲೆಯಲ್ಲಿ ಸಣ್ಣ ಏರಿಕೆಯಾಗಿದ್ದನ್ನೇ ನೆಪ ಮಾಡಿಕೊಂಡು ಜನರಿಗೆ ವಿದ್ಯುತ್ ಶಾಕ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ.
ಕಲಿದ್ದಲು ಬೆಲೆ ಇಳಿಕೆಯಾದಾಗ ಸರ್ಕಾರವು ವಿದ್ಯುತ್ ದರವನ್ನು ಇಳಿಕೆ ಮಾಡುವುದಿಲ್ಲ.
ಹೀಗಿರುವಾಗ ಕಲ್ಲಿದ್ದಲು ಬೆಲೆ ಏರಿಕೆಯಾದಾಗ ವಿದ್ಯುತ್ ದರ ಏರಿಕೆ ಮಾಡುವುದು ಎಷ್ಟು ಸರಿ? ಸರ್ಕಾರಿ ಕಚೇರಿಗಳು ಬಾಕಿ ಉಳಿಸಿಕೊಂಡಿರುವ ಸಾವಿರಾರು ಕೋಟಿ ರೂಪಾಯಿಯನ್ನು ವಸೂಲಿ ಮಾಡದ ಕಾರಣಕ್ಕೆ ವಿದ್ಯುತ್ ಕಂಪನಿಗಳು ನಷ್ಟ ಅನುಭವಿಸುತ್ತಿವೆ.
ಆ ನಷ್ಟವನ್ನು ಜನರ ತಲೆಗೆ ಕಟ್ಟುವುದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತಿದೆ” ಎಂದು ಹೇಳಿದರು.
“ದೆಹಲಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೂ ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರವು ಪ್ರತಿ ಕುಟುಂಬಕ್ಕೂ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಸುತ್ತಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಬಂದ ನಂತರ ಅಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿಲ್ಲ.
ದೆಹಲಿಯಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಿದೆ.
ಜನರು ಪಾವತಿಸುವ ಶುಲ್ಕವು ಭ್ರಷ್ಟರ ಪಾಲಾಗುತ್ತಿದ್ದರೆ, ಎಷ್ಟೇ ಶುಲ್ಕ ಏರಿಕೆ ಮಾಡಿದರೂ ಸಂಸ್ಥೆಗಳು ನಷ್ಟದಲ್ಲೇ ಮುಂದುವರಿಯುತ್ತವೆ” ಎಂದು ಭಾಸ್ಕರ್ ರಾವ್ ಹೇಳಿದರು.
“ಸಿಎಂ ಬೊಮ್ಮಾಯಿಯವರ ಬಿಜೆಪಿ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಮೂರನೇ ಸಲ ವಿದ್ಯುತ್ ದರ ಏರಿಕೆ ಮಾಡುತ್ತಿದೆ.
ಪದೇಪದೇ ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು.
ಅಗತ್ಯ ವಸ್ತುಗಳು ಹಾಗೂ ಅಗತ್ಯ ಸೌಲಭ್ಯಗಳ ಬೆಲೆ ಏರಿಕೆಯು ಮುಂದಿನ ಚುನಾವಣೆಗಳಲ್ಲಿ ಪ್ರಮುಖ ವಿಷಯವಾಗಬೇಕು” ಎಂದು ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು.
Electricity price Hike in Bangalore – Saaksha TV